ADVERTISEMENT

ನಾನೇಕೆ ರಾಜೀನಾಮೆ ನೀಡಲಿ: ಪಾರ್ಥ ಚಟರ್ಜಿ ಪ್ರಶ್ನೆ

ಪಿಟಿಐ
Published 27 ಜುಲೈ 2022, 14:23 IST
Last Updated 27 ಜುಲೈ 2022, 14:23 IST
 ಪಾರ್ಥ ಚಟರ್ಜಿ
 ಪಾರ್ಥ ಚಟರ್ಜಿ   

ಕೋಲ್ಕತ್ತ: ‘ಸಚಿವ ಸ್ಥಾನಕ್ಕೆ ನಾನೇಕೆ ರಾಜೀನಾಮೆ ನೀಡಬೇಕು’ ಎಂದು ಪಶ್ಚಿಮ ಬಂಗಾಳದ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಪಾರ್ಥ ಚಟರ್ಜಿ, ಮಾಧ್ಯಮದವರನ್ನು ಬುಧವಾರ ಖಾರವಾಗಿ ಪ್ರಶ್ನಿಸಿದ್ದಾರೆ.

ಶಾಲಾ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಪಾರ್ಥ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಹೋದ ಶನಿವಾರ ಬಂಧಿಸಿತ್ತು. ಇ.ಡಿ ಕಸ್ಟಡಿಯಲ್ಲಿರುವ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಬುಧವಾರ ಬೆಳಿಗ್ಗೆ ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.

ಈ ವೇಳೆ ಮಾಧ್ಯಮದವರು ‘ನಿಮ್ಮ ಮೇಲೆ ಹಗರಣದ ಆರೋಪ ಇದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಪದೇ ಪದೇ ಪ್ರಶ್ನಿಸಿದರು. ಇದರಿಂದ ಕೆರಳಿದ ಅವರು ‘ಏತಕ್ಕಾಗಿ ರಾಜೀನಾಮೆ ನೀಡಲಿ’ ಎಂದರು.

ADVERTISEMENT

ಮುಂದುವರಿದ ಶೋಧ: ‘ಹಣ ಅಕ್ರಮ ವರ್ಗಾವಣೆ ಸಂಬಂಧ ಬಂಧನಕ್ಕೊಳಗಾಗಿರುವ ಪಾರ್ಥ ಅವರ ಆಪ್ತೆ ಅರ್ಪಿತಾ ಮುಖರ್ಜಿಗೆ ಸೇರಿದ ಮತ್ತಷ್ಟು ಸ್ಥಳಗಳ ಮೇಲೆ ಇ.ಡಿ ಅಧಿಕಾರಿಗಳು ಬುಧವಾರವೂ ದಾಳಿ ಮಾಡಿ ಶೋಧ ನಡೆಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ರಾಜ್‌ದಂಗಾ ಹಾಗೂ ಬೆಲ್ಗೋರಿಯಾದಲ್ಲಿ ಅರ್ಪಿತಾ ಅವರು ಮೂರು ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಅವುಗಳನ್ನು ಅಧಿಕಾರಿಗಳು ಪತ್ತೆಮಾಡಿದ್ದಾರೆ. ರಾಜ್‌ದಂಗಾದಲ್ಲಿ ಅರ್ಪಿತಾ ಕಚೇರಿಯೊಂದನ್ನೂ ಹೊಂದಿದ್ದಾರೆ. ನಮ್ಮ ಅಧಿಕಾರಿಗಳು ಅಲ್ಲಿ ಶೋಧ ನಡೆಸುತ್ತಿದ್ದಾರೆ. ಬೆಲ್ಗೋರಿಯಾದಲ್ಲಿ ಅರ್ಪಿತಾ ಹೊಂದಿರುವ ಎರಡು ಫ್ಲ್ಯಾಟ್‌ಗಳ ಪೈಕಿ ಒಂದರ ಬೀಗದ ಕೀ ಸಿಕ್ಕಿಲ್ಲ. ಮುಖ್ಯದ್ವಾರ ಒಡೆದು ಫ್ಲ್ಯಾಟ್‌ನೊಳಗೆ ಹೋಗಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ವಿಚಾರಣೆಗೆ ಅರ್ಪಿತಾ ಸಹಕರಿಸುತ್ತಿದ್ದಾರೆ. ಆದರೆ ಪಾರ್ಥ ಅವರಿಂದ ಮಾಹಿತಿ ಕಲೆಹಾಕುವುದೇ ಸವಾಲೆನಿಸಿದೆ. ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಅವರು ಸರಿಯಾಗಿ ಉತ್ತರಿಸುತ್ತಲೇ ಇ‌ಲ್ಲ’ ಎಂದಿದ್ದಾರೆ.

‘ಪಾರ್ಥ, ಅರ್ಪಿತಾ ಮತ್ತು ಟಿಎಂಸಿ ಶಾಸಕ ಮಾಣಿಕ್‌ ಭಟ್ಟಾಚಾರ್ಯ ಅವರನ್ನು ಅಧಿಕಾರಿಗಳು ಏಕಕಾಲದಲ್ಲೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.