ADVERTISEMENT

ಹರಿಯಾಣ: ಬಿಜೆಪಿ ಗೆಲ್ಲುವ ನೆಚ್ಚಿನ ಪಕ್ಷ

 

ಗೌತಮ್ ಧೀರ್
Published 17 ಅಕ್ಟೋಬರ್ 2019, 10:06 IST
Last Updated 17 ಅಕ್ಟೋಬರ್ 2019, 10:06 IST
   

ಚಂಡಿಗಡ:ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ದಾಖಲಿಸಿದೆ. ಈ ಹಿಂದಿನ ನಾಲ್ಕೂ ಚುನಾವಣೆಗಳಲ್ಲಿ ಹರಿಯಾಣದ ಮತದಾರರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನೇ ರಾಜ್ಯದಲ್ಲೂ ಚುನಾಯಿಸಿದ್ದಾರೆ. ಈ ಸ್ವರೂಪದ ಮತದಾನವೇ ಮರುಕಳಿಸುವುದಾದರೆ, ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುವ ನೆಚ್ಚಿನ ಪಕ್ಷವಾಗಲಿದೆ.

ಇದೇ ಕಾರಣಕ್ಕೆ ಬಿಜೆಪಿಯು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಇದರ ಜತೆಯಲ್ಲಿ, ಮತಗಟ್ಟೆ ಮಟ್ಟದಲ್ಲೂ ಪಕ್ಷವು ಪ್ರಚಾರಕ್ಕೆ ಒತ್ತು ನೀಡಿದೆ. ತನ್ನದೇ ಆದ ಚುನಾವಣಾ ತಂತ್ರವನ್ನೂ ಅನುಸರಿಸುತ್ತಿದೆ.

1999ರಲ್ಲಿ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿ ಇತ್ತು. ಆಗಿನ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಐಎನ್‌ಎಲ್‌ಡಿ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಕೂಟವು ರಾಜ್ಯದ ಹತ್ತೂ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 1999ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಎರಡೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು.

ADVERTISEMENT

2004ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವಿತ್ತು. ಆಗ ರಾಜ್ಯದ ಜನತೆ ಕಾಂಗ್ರೆಸ್‌ ಅನ್ನು ಚುನಾಯಿಸಿದ್ದರು. 2009ರ ಚುನಾವಣೆಯಲ್ಲೂ ಇದೇ ಮರುಕಳಿಸಿತು.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವತಂತ್ರ್ಯವಾಗಿ ಸರ್ಕಾರ ರಚಿಸಿತು.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹತ್ತೂ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಅಲ್ಲದೆ ಈ ಬಾರಿ ರಾಜ್ಯ ವಿಧಾನಸಭೆಯ 75 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದೆ.

ಅಜಿತ್ ಪವಾರ್ ರಾಜೀನಾಮೆ
ಮುಂಬೈ:
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಮತ್ತು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕಾರವಾಗಿದೆ.

ರಾಜೀನಾಮೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನ ಹಣಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅಜಿತ್ ಪವಾರ್ ಅವರನ್ನು ಜಾರಿ ನಿರ್ದೇಶನಾಲಯ ಹೆಸರಿಸಿದೆ. ಇದರ ಬೆನ್ನಲ್ಲೇ ಅಜಿತ್ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.