ADVERTISEMENT

ಬಿಜೆಪಿ ಸರ್ಕಾರ ಕಾಂಗ್ರೆಸ್ ನಾಯಕರನ್ನು ಭಯೋತ್ಪಾದಕರಂತೆ ಕಾಣುತ್ತಿದೆ: ಜೈರಾಮ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 6:24 IST
Last Updated 4 ಆಗಸ್ಟ್ 2022, 6:24 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ    

ನವದೆಹಲಿ: ‘ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸರ್ಕಾರ ಭಯೋತ್ಪಾದಕರಂತೆ ಕಾಣುತ್ತಿದೆ’ ಎಂದು ಆ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

‘ಕಾಂಗ್ರೆಸ್ ಪಕ್ಷದ ಮೇಲೆ ಮುತ್ತಿಗೆ ಹಾಕಿರುವ ಬಿಜೆಪಿ ಸರ್ಕಾರದ ನಡೆ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತಾಗಿದೆ’ ಎಂದು ಕಾಂಗ್ರೆಸ್ ನಾಯಕ ಜೈರಾಮ್‌ರಮೇಶ್ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಆಡಳಿತ ಅತ್ಯಂತ ಹೀನಾಯವಾದದ್ದು. ಪ್ರಧಾನಿಯವರ ಆಕ್ರಮಣಕಾರಿ ಮನಸ್ಥಿತಿ ಈ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ'ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಬುಧವಾರಯಂಗ್ ಇಂಡಿಯಾ ಕಂಪನಿಯ ನ್ಯಾಷನಲ್ ಹೆರಾಲ್ಡ್ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವ ಹಿನ್ನೆಲೆಯಲ್ಲಿಜೈರಾಂ ರಮೇಶ್, ಅಭಿಷೇಕ ಸಿಂಘ್ವಿ, ಅಜಯ್ ಮಾಕೆನ್ ಅವರು ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

‘ಸೋನಿಯಾ ಗಾಂಧಿ ಅವರ ಮನೆಯನ್ನೂ ಪೊಲೀಸರು ಸುತ್ತುವರೆದಿದ್ದಾರೆ. ತುರ್ತು ‍ಪರಿಸ್ಥಿತಿಗೆ ಇದಕ್ಕಿಂತ ಉದಾಹರಣೆ ಬೇಕಾ?’ಎಂದು ನಾಯಕರು ಪ್ರಶ್ನಿಸಿದ್ದಾರೆ. ಆದರೆ, ಈ ಆರೋಪವನ್ನು ದೆಹಲಿ ಪೊಲೀಸರು ತಿರಸ್ಕರಿಸಿದ್ದು ‘ಕಾಂಗ್ರೆಸ್ ನಾಯಕರ ಮನೆ ಮುಂದೆ ಗಲಾಟೆ ನಡೆಯದಂತೆ ತಡೆಯಲು ಭದ್ರತೆ ಹೆಚ್ಚಿಸಲಾಗಿದೆ’ ಎಂದು ಹೇಳಿದ್ದಾರೆ.

ಮಂಗಳವಾರ, ನವದೆಹಲಿ ನ್ಯಾಷನಲ್ ಹೆರಾಲ್ಡ್ ಕೇಂದ್ರ ಕಚೇರಿ ಸೇರಿದಂತೆ ದೇಶದ 11 ಕಡೆ ಇ.ಡಿ ದಾಳಿ ನಡೆಸಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿಚಾರಣೆ ಬೆನ್ನಲ್ಲೇ ಈ ದಾಳಿಗಳು ನಡೆದಿದ್ದವು.

ನ್ಯಾಷನಲ್ ಹೆರಾಲ್ಡ್ ಹಾಗೂ ಇತರೆ ಸಂಸ್ಥೆಗಳ ಮಧ್ಯೆ ನಡೆದಿರುವ ವ್ಯವಹಾರ ಹಾಗೂ ಹಣ ಅಕ್ರಮ ವರ್ಗಾವಣೆಯ ತನಿಖೆಯ ಭಾಗವಾಗಿ ಶೋಧ ಕಾರ್ಯಾಚರಣೆ ನಡೆದಿತ್ತು. ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಶೋಧ ನಡೆಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದರು. ಇದೇ ಪ್ರಕರಣದಲ್ಲಿ ನಿಗಾ ಇರಿಸಲಾಗಿರುವ ಕೋಲ್ಕತ್ತದ ಶೆಲ್ ಕಂಪನಿಗೆ (ಹಣ ಅಕ್ರಮ ವರ್ಗಾವಣೆಗಾಗಿ ಸೃಷ್ಟಿಸಲಾಗಿರುವ ಕಂಪನಿ ಎನ್ನಲಾದ) ಸೇರಿದ ಜಾಗದಲ್ಲೂ ಶೋಧ ನಡೆದಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡರಾದ ರಾಹುಲ್ ಗಾಂಧಿ, ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪವನ್ ಬನ್ಸಾಲ್ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಸಿಕ್ಕ ಮಾಹಿತಿ ಆಧರಿಸಿ, ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವಾರ, ಸೋನಿಯಾ ಅವರನ್ನು 11 ಗಂಟೆ ವಿಚಾರಣೆ ನಡೆಸಲಾಗಿತ್ತು. ಜೂನ್ ತಿಂಗಳಲ್ಲಿ, ರಾಹುಲ್ ಅವರನ್ನು 50 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಏಪ್ರಿಲ್‌ನಲ್ಲಿ ಖರ್ಗೆ ಹಾಗೂ ಬನ್ಸಾಲ್ ಅವರನ್ನೂ ವಿಚಾರಣೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.