ADVERTISEMENT

ಗೂಗಲ್‌ ಪರ ಆದೇಶ ಹೊರಡಿಸಲು ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:29 IST
Last Updated 24 ಸೆಪ್ಟೆಂಬರ್ 2021, 22:29 IST

ನವದೆಹಲಿ: ತನ್ನ ವಿರುದ್ಧ ತನಿಖೆ ನಡೆಸುತ್ತಿರುವ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನಿಖೆಯ ವರದಿಯನ್ನು ಸೋರಿಕೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ಗೂಗಲ್‌ ಸಂಸ್ಥೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಯಾವುದೇ ಆದೇಶ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ಸಿಸಿಐನ ಮಹಾ ನಿರ್ದೇಶಕರು ನೀಡಿದ ವರದಿಯನ್ನು ಪರಿಶೀಲಿಸದೇ ಮಾಹಿತಿ ಸೋರಿಕೆ ಮಾಡದಂತೆ ಹೇಗೆ ಆದೇಶ ನೀಡುವುದು ಎಂದು ನ್ಯಾಯಮೂರ್ತಿ ರೇಖಾ ಪಳ್ಳಿ ಅವರಿದ್ದ ಪೀಠ ಗೂಗಲ್‌ ಸಂಸ್ಥೆಯನ್ನು ಪ್ರಶ್ನಿಸಿದೆ. ಈ ಅರ್ಜಿ ವಿಚಾರಣೆಯನ್ನು ಸೆ.27ಕ್ಕೆ ಕಾಯ್ದಿರಿಸಿದೆ.

ಗೂಗಲ್‌ ಪರ ವಾದ ಮಾಡಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ವರದಿಯ ಮಾಹಿತಿಯನ್ನು ಪತ್ರಿಕೆಗಳಿಗೆ ನೀಡಲಾಗಿದೆ. ಈ ಕುರಿತ ಯಾವ ಮಾಹಿತಿಯೂ ಇನ್ನು ಒಂದು ನಿಮಿಷವೂ ಸೋರಿಕೆ ಆಗಬಾರದು ಎಂದು ಹೇಳಿದರು.

ADVERTISEMENT

ಸಿಸಿಐ ಪರವಾಗಿ ಕೋರ್ಟ್‌ನಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌. ವೆಂಕಟರಮಣನ್‌, ‘ನಾವು ತನಿಖೆ ಮಾಹಿತಿಯನ್ನು ಸೋರಿಕೆ ಮಾಡಿದ್ದೇವೆ ಎಂದು ತೋರಿಸಲು ಯಾವ ಆಧಾರವೂ ಇಲ್ಲ. ಅದರಲ್ಲಿ ಗೌಪ್ಯತೆ ಕಾಪಾಡುವಂಥದ್ದು ಏನಿದೆ. ಗೂಗಲ್‌ ವಿರುದ್ಧ ಸಿಸಿಐ ತನಿಖೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಪತ್ರಿಕೆಗಳು ಬಹಿರಂಗಪಡಿಸಿವೆ. ಅದನ್ನು ಹೊರತುಪಡಿಸಿದರೆ ಬೇರೆ ಯಾವ ಮಾಹಿತಿ ಬಹಿರಂಗವಾಗಿದೆ? ಈ ಕುರಿತು ಗೂಗಲ್‌ಗೆ ಬೇಸರವಾಗಿದ್ದರೆ ಪತ್ರಿಕೆಗಳ ವಿರುದ್ಧ ಮೊಕದ್ದಮೆ ಹೂಡಲಿ ಎಂದರು.

ಆ್ಯಂಡ್ರಾಯ್ಡ್‌ ಸಂಸ್ಥೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಗೂಗಲ್‌ ಸಂಸ್ಥೆ ಅವ್ಯವಹಾರ ನಡೆಸುತ್ತಿದೆ ಎಂಬ ಕುರಿತು ಸಿಸಿಐ ಮಹಾ ನಿರ್ದೇಶಕರು ಮಾಹಿತಿ ಕಲೆಹಾಕಿದ್ದರು. ಈಗ ಆ ವರದಿ ಸೋರಿಕೆಯಾಗಿದೆ. ವರದಿ ಕುರಿತು ಸಿಸಿಐ ಗೌಪ್ಯತೆ ಕಾಪಾಡಬೇಕಿತ್ತು ಎಂದು ಗೂಗಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.