ADVERTISEMENT

ಸಿಜೆಐ ನಿವೃತ್ತಿಗೂ ಮೊದಲೇ ತೀರ್ಪು ಬರಲಿ– ಕಾಂಗ್ರೆಸ್‌

ಆರ್ಟಿಕಲ್‌ 110ರ ದುರ್ಬಳಕೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ

ಪಿಟಿಐ
Published 15 ಜುಲೈ 2024, 14:07 IST
Last Updated 15 ಜುಲೈ 2024, 14:07 IST
.
.   

ನವದೆಹಲಿ: ವಿವಿಧ ಕಾನೂನುಗಳಿಗೆ ಶಾಸನಸಭೆಯ ಅಂಗೀಕಾರ ಪಡೆದ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ಸಂವಿಧಾನ ಪೀಠ ರಚಿಸಬೇಕು ಎಂಬ ಕೋರಿಕೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿರುವುದನ್ನು ಕಾಂಗ್ರೆಸ್‌ ಸ್ವಾಗತಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ವರ್ಷ ನವೆಂಬರ್‌ನಲ್ಲಿ ನಿವೃತ್ತಿ ಪಡೆಯುವ ಮೊದಲು ಈ ವಿಚಾರವಾಗಿ ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆ ಇದೆ ಎಂದು ಅದು ಸೋಮವಾರ ಹೇಳಿದೆ.

ಹಿರಿಯ ವಕೀಲ ಕಪಿಲ್‌ ಸಿಬಲ್ ಅವರು, ಈ ಕುರಿತ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಪಟ್ಟಿ ಮಾಡಬೇಕು ಎಂದು ಸಿಜೆಐ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನು ಕೋರಿದರು. ನಂತರ ಸಂವಿಧಾನ ಪೀಠ ರಚನೆ ನಂತರ ವಿಚಾರಣೆ ನಡೆಸುವುದಾಗಿ ಸಿಜೆಐ ಹೇಳಿದರು.

ADVERTISEMENT

ಈ ಬಗ್ಗೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಕಳೆದ 10 ವರ್ಷಗಳಲ್ಲಿ ಹಲವು ಕಾನೂನುಗಳಿಗೆ ಶಾಸನಸಭೆಯ ಅಂಗೀಕಾರ ಪಡೆಯಲಾಗಿದೆ. ಸಂವಿಧಾನದ 110ನೇ ಅನುಚ್ಛೇದದ ಅಡಿಯಲ್ಲಿ ಅವುಗಳನ್ನು ‘ಹಣಕಾಸು ಮಸೂದೆ’ಗಳು ಎಂದು ಘೋಷಿಸಲಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ 2016ರ ಆಧಾರ್‌ ಕಾಯ್ದೆ’ ಎಂದು ಹೇಳಿದ್ದಾರೆ.

‘ಈ ಘೋಷಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೆ. ಸಿಜೆಐ ಚಂದ್ರಚೂಡ್‌ ಅವರು ಇದನ್ನು ‘ಸಂವಿಧಾನಕ್ಕೆ ಮಾಡಿದ ವಂಚನೆ’ ಎಂದು ಕರೆದಿದ್ದರು. ನಂತರದಲ್ಲಿ ಇದೇ ರೀತಿಯ ಹಲವು ಪ್ರಕರಣಗಳನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದೆ’ ಎಂದು ಹೇಳಿದ್ದಾರೆ.

‘2014ರಿಂದ ಈವರೆಗೆ ನಡೆದ ಅನುಚ್ಛೇದ 110ರ ದುರ್ಬಳಕೆ ಕುರಿತ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕ ಸಾಂವಿಧಾನಿಕ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿರುವುದು ಸ್ವಾಗತಾರ್ಹ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಈ ಕುರಿತ ಅರ್ಜಿಗಳ ವಿಚಾರಣೆಗೆ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.