ADVERTISEMENT

ವಿಕಸಿತ ಭಾರತಕ್ಕೆ ಏಕತೆಯೇ ಮಾರ್ಗ: ಮೋದಿ

ಗೋವಾದಲ್ಲಿ ನಿರ್ಮಿಸಲಾದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ

ಪಿಟಿಐ
Published 28 ನವೆಂಬರ್ 2025, 14:49 IST
Last Updated 28 ನವೆಂಬರ್ 2025, 14:49 IST
ಶ್ರೀ ರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅನಾವರಣಗೊಳಿಸಿದರು –ಪಿಟಿಐ ಚಿತ್ರ
ಶ್ರೀ ರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅನಾವರಣಗೊಳಿಸಿದರು –ಪಿಟಿಐ ಚಿತ್ರ   

ಪಣಜಿ: ‘ಸಮಾಜವು ಒಗ್ಗಟ್ಟಿನಿಂದ ಇದ್ದಾಗ, ಒಬ್ಬರಿಗಾಗಿ ಇನ್ನೊಬ್ಬರು ನಿಂತಾಗ ವಿಕಸಿತ ಭಾರತ ನಿರ್ಮಾಣ ಸಾಧ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು.

ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದ 550ನೇ ವಾರ್ಷಿಕೋತ್ಸವ ಅಂಗವಾಗಿ ನಿರ್ಮಿಸಲಾದ ಶ್ರೀ ರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ‘ಭಾರತವು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ದೇಗುಲದ ನವೀಕರಣ, ಉಜ್ಜಯಿನಿಯ ಮಹಾಕಾಳ ಮಹಾಲೋಕ ದೇಗುಲದ ಅಭಿವೃದ್ಧಿ– ಇವೆಲ್ಲವೂ ಆಧ್ಯಾತ್ಮಿಕ ಪರಂಪರೆಯ ಪುನರುಜ್ಜೀವನ ಮತ್ತು ರಾಷ್ಟ್ರದ ಜಾಗೃತಿಯು ಎಚ್ಚರಗೊಂಡಿರುವುದಕ್ಕೆ ಉದಾಹರಣೆ ಎಂದು ಹೇಳಿದರು.

ADVERTISEMENT

‘ಹಲವು ಕಠಿಣ ಸನ್ನಿವೇಶಗಳ ನಡುವೆಯೂ ಕಾಲಕ್ಕೆ ಅನುಗುಣವಾದ ಬದಲಾವಣೆಗಳೊಂದಿಗೆ ಗೋವಾ ತನ್ನ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿದೆ. ಒಂದು ಕಾಲದಲ್ಲಿ ಗೋವಾದ ದೇಗುಲಗಳು ಮತ್ತು ಸಂಪ್ರದಾಯಗಳು ಬಿಕ್ಕಟ್ಟನ್ನು ಎದುರಿಸಿದ್ದವು. ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಅಂಥ ಸಂದಿಗ್ಧ ಸನ್ನಿವೇಶಗಳಿಗೆ ಸಮಾಜದ ಆತ್ಮವನ್ನು ದುರ್ಬಲಗೊಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಗೋವಾ ಇನ್ನಷ್ಟು ದೃಢವಾಗಿ ನಿಂತಿತು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೋದಿ ಅವರು, ರಾಮಯಣ ಥೀಮ್‌ ಪಾರ್ಕ್‌ ಅನ್ನು ಉದ್ಘಾಟನೆ ಮಾಡಿದರು.

‘ಜಗತ್ತಿನ ಅತಿ ಎತ್ತರದ ರಾಮನ ಪ್ರತಿಮೆ’

ಗುಜರಾತ್‌ನ ಏಕತಾ ಪ್ರತಿಮೆಯ ಶಿಲ್ಪಿ ರಾಮ್‌ ಸುತಾರ್‌ ಅವರೇ ರಾಮನ ಕಂಚಿನ ಪ್ರತಿಮೆಯನ್ನೂ ನಿರ್ಮಿಸಿದ್ದಾರೆ ಎಂದು ಗೋವಾ ಲೋಕೋಪಯೋಗಿ ಸಚಿವ ದಿಗಂಬರ ಕಾಮತ್‌ ತಿಳಿಸಿದರು. ಇದು ಜಗತ್ತಿನ ಅತಿ ಎತ್ತರ ರಾಮನ ಪ್ರತಿಮೆ ಎಂದು ಅವರು ಹೇಳಿದರು.

ಮೋದಿ ಹೇಳಿದ್ದು...

*550 ವರ್ಷಗಳಲ್ಲಿ ಮಠವು ಲೆಕ್ಕವಿಲ್ಲದಷ್ಟು ಸವಾಲುಗಳನ್ನು ಎದುರಿಸಿದೆ. ಯುಗಗಳು ಉರುಳಿವೆ ಕಾಲಗಳು ಕಳೆದಿವೆ ಆದರೆ ಅದರ ಪಥ ಬದಲಾಗಿಲ್ಲ

*ರಾಮಾಯಣ ಥೀಮ್‌ ಪಾರ್ಕ್‌ ಮುಂಬರುವ ಪೀಳಿಗೆಗಳಿಗೆ ಧ್ಯಾನದ ತಾಣವಾಗಲಿದೆ

*ಸಾಧು ಮತ್ತು ಸಂತರೊಂದಿಗೆ ಕಾಲ ಕಳೆಯುವುದು ಒಂದು ಆಧ್ಯಾತ್ಮಕ ಅನುಭೂತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.