ನವದೆಹಲಿ: ‘ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನಾಗರಿಕರ ಮಾಹಿತಿ ಹಕ್ಕನ್ನು ತೆಗೆದುಹಾಕುವ ನಿಬಂಧನೆಯನ್ನು ಕಿತ್ತುಹಾಕುವುದು ಸಂಪೂರ್ಣವಾಗಿ ಅನಗತ್ಯ’ ಎಂದು ತಿಳಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2005ರ ಮೂಲ ಕಾಯ್ದೆಗೆ ತಿದ್ದುಪಡಿ ಮಾಡುವ ನಿರ್ಧಾರವನ್ನು ಪರಿಶೀಲಿಸಿ, ತಕ್ಷಣವೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಆರ್‌ಟಿಐ –2005ರ ಮೂಲ ಕಾಯ್ದೆಗೆ ತಿದ್ದುಪಡಿ ಮಾಡಿದ ನಿರ್ಧಾರವನ್ನು ಪರಿಶೀಲಿಸಿ, ತಕ್ಷಣವೇ ರದ್ದುಗೊಳಿಸಬೇಕು’ ಎಂದು ಈ ವೇಳೆ ಅವರು ಆಗ್ರಹಿಸಿದ್ದಾರೆ.
ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ-2023ರ ಅನ್ವಯ (ಡಿಪಿಡಿಪಿ) ಸೆಕ್ಷನ್ 44 (3)ರಂತೆ ಆರ್‌ಟಿಐ ಅಡಿಯಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೆಯನ್ನು ನಿರ್ಬಂಧಿಸಿರುವ ಕುರಿತು ಕಳವಳ ವ್ಯಕ್ತಪಡಿಸಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಈ ಹಿಂದೆ ಪತ್ರ ಬರೆದಿದ್ದರು.
ಇದಕ್ಕೆ ಉತ್ತರಿಸಿದ ಅಶ್ವಿನಿ ವೈಷ್ಣವ್, ‘ದತ್ತಾಂಶ ಸುರಕ್ಷತೆ ಕಾಯ್ದೆ ಜಾರಿಯಾದರೂ ಆರ್‌ಟಿಐ ಅಡಿಯಲ್ಲಿ ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲು ಕಾನೂನಿನಡಿಯಲ್ಲಿ ಅವಕಾಶ ಇರಲಿದೆ’ ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, ‘ಮಾಹಿತಿ ಹಕ್ಕು ಕಾಯ್ದೆಗೆ ಮಾಡಿದ ತಿದ್ದುಪಡಿ ಕುರಿತು ಕಳವಳ ವ್ಯಕ್ತಪಡಿಸಿ ಮಾರ್ಚ್ 23ರಂದು ಬರೆದ ಪತ್ರಕ್ಕೆ 2025ರ ಏಪ್ರಿಲ್ 10ರಂದು ಉತ್ತರ ನೀಡಿರುವುದಕ್ಕೆ ಧನ್ಯವಾದಗಳು. ಡಿಪಿಡಿಪಿ ಸೆಕ್ಷನ್ 3ರ ಅಡಿಯಲ್ಲಿ ಮಾಹಿತಿ ಬಹಿರಂಗಗೊಳಿಸುವುದನ್ನು ರಕ್ಷಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಆದರೆ, ವೈಯಕ್ತಿಕವಾದ ಎಲ್ಲ ಮಾಹಿತಿಗಳನ್ನು ಪಡೆಯಲು ವಿನಾಯಿತಿ ನೀಡುತ್ತದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.