ADVERTISEMENT

ಪವನ್‌ ಖೇರಾ ಬಂಧನಕ್ಕೆ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 11:22 IST
Last Updated 23 ಫೆಬ್ರುವರಿ 2023, 11:22 IST
ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ (ಪಿಟಿಐ ಚಿತ್ರ)
ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ (ಪಿಟಿಐ ಚಿತ್ರ)   

ರಾಯಪುರ: ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಕ್ಕೆ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಫೆಬ್ರುವರಿ 24 ರಿಂದ 26 ರವರೆಗೆ ಕಾಂಗ್ರೆಸ್‌ ಪಕ್ಷದ 85ನೇ ಮಹಾಧಿವೇಶನ ನಡೆಯುತ್ತಿದೆ. ಈ ಅಧಿವೇಶನಕ್ಕೆ ಬರಲು ಪವನ್‌ ಖೇರಾ ವಿಮಾನ ನಿಲ್ದಾಣದಲ್ಲಿ ಇರುವಾಗಲೇ ಅಸ್ಸಾಂ ಪೊಲೀಸರು ಅವರನ್ನು ಬಂಧಿಸಿದ್ದರು. ಬಂಧನಕ್ಕೊಳಗಾಗಿದ್ದ ಪವನ್ ಖೇರಾ ಅವರಿಗೆ ಸುಪ್ರೀಂಕೋರ್ಟ್‌ ಇಂದು ಮಧ್ಯಂತರ ಜಾಮೀನು ನೀಡಿದೆ.

ಖೇರಾ ಬಂಧನವನ್ನು ಖಂಡಿಸಿದ ಭೂಪೇಶ್ ಬಘೇಲ್ ಅವರು, ಕಾಂಗ್ರೆಸ್‌ ಮಹಾಧಿವೇಶನಕ್ಕೆ ಅಡ್ಡಿಪಡಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಿತೂರಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಮಹಾಧಿವೇಶನಕ್ಕಾಗಿ ಇಲ್ಲಿಗೆ ಬರುವ ನಮ್ಮ ನಾಯಕರಿಗೆ ಬಿಜೆಪಿ ತೊಂದರೆ ಕೊಡುತ್ತಿದೆ. ಖೇರಾ ಅವರು ಏನು ಅಪರಾಧ ಮಾಡಿದ್ದಾರೆ? ವಿಮಾನದಿಂದ ಕೆಳಗಿಳಿಸುವಂತಹ ತಪ್ಪು ಏನು ಮಾಡಿದ್ದಾರೆ ಎಂದು ಭೂಪೇಶ್ ಬಘೇಲ್ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷ ಒಗ್ಗಟ್ಟಾಗಿದೆ, ಬಿಜೆಪಿಯವರು ಏನೇ ಕಿರುಕುಳ ನೀಡಿದರೂ ನಮ್ಮ ಅಧಿವೇಶನ ಯಶಸ್ವಿಯಾಗಲಿದೆ ಎಂದು ಭೂಪೇಶ್ ಬಘೇಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.