ADVERTISEMENT

ಪೇಟಿಎಂ ಸ್ಥಾಪಕನಿಗೆ ಸಿಬ್ಬಂದಿಯಿಂದಲೇ ಬ್ಲ್ಯಾಕ್‌ಮೇಲ್‌: ₹20ಕೋಟಿ ಸುಲಿಗೆಗೆ ಯತ್ನ

ವಿಜಯ್‌ ಶೇಖರ್‌ ಶರ್ಮಾ ಆಪ್ತ ಕಾರ್ಯದರ್ಶಿ, ಇತರೆ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 17:12 IST
Last Updated 23 ಅಕ್ಟೋಬರ್ 2018, 17:12 IST
   

ನವದೆಹಲಿ: ಕಂಪ್ಯೂಟರ್‌ ಮತ್ತು ಮೊಬೈಲ್‌ ಫೋನ್‌ಗಳಿಂದ ಖಾಸಗಿ ಮಾಹಿತಿ ಕದ್ದು, ₹20 ಕೋಟಿ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಪೇಟಿಎಂ ಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ ಅವರ ಆ‍ಪ್ತ ಕಾರ್ಯದರ್ಶಿ ಸೋನಿಯಾ ಧವನ್‌ ಮತ್ತು ಇತರೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶರ್ಮಾ ಅವರ ಲ್ಯಾಪ್‌ಟಾಪ್‌, ಫೋನ್‌ಗಳು ಹಾಗೂ ಕಚೇರಿಯಲ್ಲಿನ ಇತರೆ ಕಂಪ್ಯೂಟರ್‌ಗಳಿಂದ ಆರೋಪಿಗಳು ಖಾಸಗಿ ಮಾಹಿತಿ ಕದ್ದಿದ್ದರು. ದೀರ್ಘಕಾಲದಿಂದ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋನಿಯಾ ಮತ್ತು ದೇವೆಂದರ್‌ ಕುಮಾರ್‌ ಹಾಗೂ ಸೋನಿಯಾ ಪತಿ ರೂಪಕ್‌ ಜೈನ್‌ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರ್ಮಾ ಅವರ ಸಹೋದರ ಹಾಗೂ ಪೇಟಿಎಂ ಉಪಾಧ್ಯಕ್ಷ ಅಜಯ್‌ ಶೇಖರ್‌ ಅವರಿಗೆ ಕೊಲ್ಕತ್ತಾದಿಂದ ರೋಹಿತ್‌ ಚೋಪಳ್‌ ಎಂಬುವನು ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ. ಈತ, ರೂಪಕ್‌ ಜೈನ್‌ಗೆ ಆಪ್ತ ಎನ್ನಲಾಗಿದೆ. ಅವನ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಸೋನಿಯಾ ಹತ್ತು ವರ್ಷಗಳಿಂದ, ದೇವೇಂದರ್‌ ಏಳು ವರ್ಷಗಳಿಂದ ಪೇಟಿಎಂನಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿ ಮುಖ್ಯಸ್ಥರ ಹಣಕಾಸಿನ ವಿವರವನ್ನು ಕದ್ದಿರುವುದಲ್ಲದೆ, ಅವರ ಖಾಸಗಿ ಮಾಹಿತಿಯನ್ನೂ ಪಡೆದು ಚೋಪಳ್‌ಗೆ ನೀಡಿದ್ದಾರೆ. ಅಲ್ಲದೆ, ಅಜಯ್‌ ಶೇಖರ್‌ಗೆ ಬ್ಲ್ಯಾಕ್‌ಮೇಲ್‌ ಮಾಡಲು ₹2 ಲಕ್ಷವನ್ನೂ ಚೋಪಳ್‌ನ ಬ್ಯಾಂಕ್‌ ಖಾತೆಗೆ ಹಾಕಲಾಗಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.