ADVERTISEMENT

ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಲು ಮದನಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪಿಟಿಐ
Published 17 ಜುಲೈ 2023, 16:39 IST
Last Updated 17 ಜುಲೈ 2023, 16:39 IST
ಅಬ್ದುಲ್ ನಾಸರ್ ಮದನಿ
ಅಬ್ದುಲ್ ನಾಸರ್ ಮದನಿ   

ನವದೆಹಲಿ: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸಿರ್ ಮದನಿ ಅವರು ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಿ, ಅಲ್ಲಿಯೇ ಉಳಿಯಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಎಂ.ಎಂ. ಸುಂದರೇಶ್ ಅವರನ್ನೊಳಗೊಂಡ ನ್ಯಾಯಪೀಠವು, ವಿಚಾರಣೆ ಮುಗಿಯುವ ತನಕ ಬೆಂಗಳೂರಿನಲ್ಲೇ ಇರಬೇಕೆಂಬ ಮದನಿ ಅವರಿಗಿದ್ದ ಷರತ್ತನ್ನು ಮಾರ್ಪಡಿಸಿದೆ.

‘ಅರ್ಜಿದಾರರಿಗೆ ಕೇರಳಕ್ಕೆ ತೆರಳಲು ಹಾಗೂ ಅಲ್ಲಿಯೇ ಉಳಿಯಲು ಅನುಮತಿ ನೀಡಲಾಗಿದೆ’ ಎಂದು ನ್ಯಾಯಪೀಠವು ತಿಳಿಸಿದೆ.

ADVERTISEMENT

ಆದಾಗ್ಯೂ, ಅರ್ಜಿದಾರರ ಬದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ 15 ದಿನಗಳಿಗೊಮ್ಮೆ ಅರ್ಜಿದಾರರು ಕೊಲ್ಲಂ ಜಿಲ್ಲೆಯ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಲು ನ್ಯಾಯಪೀಠವು ಸೂಚಿಸಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಮದನಿ ಅವರಿಗೆ ಸುಪ್ರೀಂ ಕೋರ್ಟ್ 2014ರಲ್ಲಿ ಜಾಮೀನು ನೀಡಿತ್ತು. ಆದರೆ, ಬೆಂಗಳೂರನ್ನು ಬಿಟ್ಟು ತೆರಳದಂತೆ ಸೂಚಿಸಿತ್ತು.

2008ರ ಜುಲೈ 25ರಂದು ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಇಬ್ಬರು ಸಾವಿಗೀಡಾಗಿ, 20 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.