ADVERTISEMENT

ಪೆಗಾಸಸ್ ಗೂಢಚರ್ಯೆ ಪ್ರಕರಣ: ಸುಪ್ರೀಂನಿಂದ ಶೀಘ್ರ ಮಧ್ಯಂತರ ಆದೇಶ

ರಾಷ್ಟ್ರೀಯ ಹಿತಾಸಕ್ತಿ ಕಾರಣಕ್ಕೆ ವಿವರವಾದ ಪ್ರಮಾಣಪತ್ರ ಸಲ್ಲಿಸಲಾಗದು ಎಂದು ಹೇಳಿದ ಕೇಂದ್ರ ಸರ್ಕಾರ

ಪಿಟಿಐ
Published 13 ಸೆಪ್ಟೆಂಬರ್ 2021, 12:02 IST
Last Updated 13 ಸೆಪ್ಟೆಂಬರ್ 2021, 12:02 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಪೆಗಾಸಸ್‌ ಗೂಢಚರ್ಯೆ ಪ್ರಕರಣವನ್ನು ಸ್ವತಂತ್ರವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಪ್ರಮಾಣ ಪತ್ರವನ್ನು ಸಲ್ಲಿಸಲು ಬಯಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದು, ತಾನು ಶೀಘ್ರವೇ ಮಧ್ಯಂತರ ಆದೇಶ ನೀಡುವುದಾಗಿ ಕೋರ್ಟ್‌ ಹೇಳಿದೆ.

‘ನಾವು ಸದ್ಯ ಆದೇಶವನ್ನು ಕಾಯ್ದಿರಿಸಿದ್ದೇವೆ. ವಿವರವಾದ ಪ್ರಮಾಣಪತ್ರ ಸಲ್ಲಿಸುವ ವಿಚಾರವೇನಾದರೂ ಇದ್ದರೆ ತಿಳಿಸಬೇಕು, ಇನ್ನು ಎರಡು–ಮೂರು ದಿನಗಳಲ್ಲಿ ಮಧ್ಯಂತರ ಆದೇಶ ಹೊರಡಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು.

‘ಸರ್ಕಾರ ಪ್ರಮಾಣಪತ್ರ ಸಲ್ಲಿಸಲು ಬಯಸುವುದಿಲ್ಲ ಎಂದು ನೀವು ಪದೇ ಪದೇ ಹೇಳುತ್ತಿದ್ದೀರಿ. ದೇಶದ ಭದ್ರತಗೆ ಸಂಬಂಧಿಸಿದ ಯಾವುದೇ ವಿಷಯವನ್ನು ನಮ್ಮ ಮುಂದೆ ಇಡಬೇಕು ಎಂದು ನಾವು ಬಯಸುತ್ತಿಲ್ಲ. ಸಮಿತಿಯೊಂದನ್ನು ರಚಿಸಿ, ಅದು ಸಲ್ಲಿಸುವ ವರದಿಯನ್ನು ನೀಡುವುದಾಗಿ ನೀವು ಹೇಳುತ್ತಿದ್ದೀರಿ. ಈ ಎಲ್ಲಾ ವಿಷಯಗಳನ್ನು ಗಮನಿಸಿ ನಾವು ಮಧ್ಯಂತರ ಆದೇಶ ನೀಡಬೇಕಿದೆ’ ಎಂದು ಹೇಳಿದ ನ್ಯಾಯಪೀಠ, ‘ಮೆಹ್ತಾ ಅವರೇ, ನೀವು ಪೊದೆಯ ಸುತ್ತ ಹೊಡೆಯುತ್ತಿದ್ದೀರಿ, ಅದು ಇಲ್ಲಿ ಪ್ರಶ್ನೆಯಲ್ಲ’ ಎಂದು ಮಾರ್ಮಿಕವಾಗಿ ನುಡಿಯಿತು.

ADVERTISEMENT

ಇದಕ್ಕೆ ಮೊದಲು ಹೇಳಿಕೆ ನೀಡಿದ ತುಷಾರ್ ಮೆಹ್ತಾ,‘ಸರ್ಕಾರ ಯಾವ ಸಾಫ್ಟ್‌ವೇರ್ ಬಳಸಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗದು, ಒಂದು ವೇಳೆ ಇಂತಹ ಮಾಹಿತಿಗಳನ್ನು ನೀಡಿದರೆ ಭಯೋತ್ಪಾದಕರು ಅದನ್ನು ನಿಗ್ರಹಿಸುವ ವ್ಯವಸ್ಥೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.