ADVERTISEMENT

ದೇಗುಲಗಳಲ್ಲಿನ ವಿಐಪಿ ಸಂಸ್ಕೃತಿಯಿಂದ ಜನ ಹತಾಶರಾಗಿದ್ದಾರೆ: ಮದ್ರಾಸ್‌ ಹೈಕೋರ್ಟ್

ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ಅಭಿಮತ

ಪಿಟಿಐ
Published 23 ಮಾರ್ಚ್ 2022, 14:08 IST
Last Updated 23 ಮಾರ್ಚ್ 2022, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮದುರೈ: ‘ಕೆಲ ಸ್ಥಳಗಳಲ್ಲಿ, ಅದರಲ್ಲೂ ವಿಶೇಷವಾಗಿ ದೇವಸ್ಥಾನಗಳಲ್ಲಿನ ‘ವಿಐಪಿ ಸಂಸ್ಕೃತಿ’ಯಿಂದ ಜನರು ಹತಾಶರಾಗಿದ್ದಾರೆ’ ಎಂದು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ಬುಧವಾರ ಹೇಳಿದೆ.

‘ಗಣ್ಯ ವ್ಯಕ್ತಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಮಾತ್ರ ದೇವಸ್ಥಾನಗಳಲ್ಲಿ ವಿಐಪಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಗಣ್ಯರ ಸಂಬಂಧಿಕರಿಗೆ ಈ ಸೌಲಭ್ಯ ನೀಡಬಾರದು’ ಎಂದು ನ್ಯಾಯಮೂರ್ತಿ ಎಸ್‌.ಎಂ.ಸುಬ್ರಮಣಿಯಮ್ ಹೇಳಿದರು.

ತೂತ್ತುಕುಡಿ ಜಿಲ್ಲೆಯ ತಿರುಚೆಂಡೂರ್‌ನಲ್ಲಿರುವ ಪ್ರಸಿದ್ಧ ಅರುಳ್‌ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿರುವ ವಿಶೇಷ ದರ್ಶನ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

‘ಕೆಲ ದೇವಸ್ಥಾನಗಳಲ್ಲಿ ವಿಶೇಷ ದರ್ಶನ ವ್ಯವಸ್ಥೆ ಇರಬೇಕು ಎಂಬ ವಾದ ಸರಿ. ಆದರೆ, ಎಲ್ಲ ನಾಗರಿಕರು ಸಮಾನ ಎಂಬ ಆಶಯಕ್ಕೆ ಈ ವ್ಯವಸ್ಥೆ ಧಕ್ಕೆ ತರಬಾರದು. ಅದರಲ್ಲೂ, ದೇವಸ್ಥಾನಗಳಂತಹ ಸ್ಥಳಗಳಲ್ಲಿ ಈ ವಿಐಪಿ ಸಂಸ್ಕೃತಿಯಿಂದ ಜನರು ರೋಸಿ ಹೋಗಿದ್ದಾರೆ. ಅವರು ಶಾಪ ಹಾಕುತ್ತಿದ್ದಾರೆ’ ಎಂದು ನ್ಯಾಯಮೂರ್ತಿಸುಬ್ರಮಣಿಯಮ್ ಹೇಳಿದರು.

ಸಾರ್ವಜನಿಕ ದರ್ಶನಕ್ಕೆ ತೊಂದರೆಯಾಗದ ರೀತಿಯಲ್ಲಿ ವಿಶೇಷ ದರ್ಶನ ವ್ಯವಸ್ಥೆ ಮಾಡುವುದು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳ ಕರ್ತವ್ಯ ಎಂದೂ ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.