ನವದೆಹಲಿ: ‘ಕೈಗೆಟಕುವ ದರದಲ್ಲಿ ಮನೆ ಒದಗಿಸಲು ಸರ್ಕಾರಗಳ ಬಳಿ ಹಣವಿಲ್ಲ, ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ... ಹೀಗಿರುವಾಗ ನೀವು ಸೈಕಲ್‌ಗಳಿಗಾಗಿ ಪ್ರತ್ಯೇಕ ಪಥ ಹೊಂದುವ ಹಗಲುಗನಸು ಕಾಣುತ್ತಿದ್ದೀರಿ...’
ಸೈಕ್ಲಿಸ್ಟ್ ದೇವಿಂದರ್ ಸಿಂಗ್ ನಾಗಿ ಅವರು ಸಲ್ಲಿಸಿದ್ದ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಹೇಳಿದ ಮಾತು ಇದು.
ದೇಶದಲ್ಲಿ ಸೈಕಲ್‌ಗಳಿಗೆ ಪ್ರತ್ಯೇಕವಾದ ಪಥ ಇರಬೇಕು ಎಂಬ ಕೋರಿಕೆ ಇರುವ ಅರ್ಜಿಯು ಪೀಠದ ಎದುರು ಬಂದಿತ್ತು. ಆದ್ಯತೆಗಳನ್ನು ಸರಿಯಾಗಿ ಪಟ್ಟಿ ಮಾಡಿಕೊಳ್ಳಬೇಕು, ಹೆಚ್ಚು ತುರ್ತಿನ ಇತರ ವಿಷಯಗಳಿಗೆ ಗಮನ ನೀಡಬೇಕಾದ ಅಗತ್ಯ ಇದೆ ಎಂದು ಪೀಠ ಹೇಳಿತು.
‘ಕೊಳೆಗೇರಿಗಳಿಗೆ ಭೇಟಿ ಕೊಡಿ, ಅಲ್ಲಿ ಜನ ಯಾವ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ನೋಡಿ. ಜನರಿಗೆ ಕೈಗೆಟಕುವ ದರದಲ್ಲಿ ಸೂರು ಕೊಡಲು ಸರ್ಕಾರಗಳ ಬಳಿ ಹಣವಿಲ್ಲ, ನಾವಿಲ್ಲಿ ಹಗಲುಗನಸು ಕಾಣುತ್ತಿದ್ದೇವೆ...’ ಎಂದು ಪೀಠವು ಪ್ರತಿಕ್ರಿಯಿಸಿತು.
‘ಸಂವಿಧಾನದ 21ನೆಯ ವಿಧಿಯ ಬಗ್ಗೆ ನಾವು ಹೆಚ್ಚು ಚಿಂತಿತರಾಗಬೇಕು. ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿವೆ, ನೀವು ಸೈಕಲ್‌ಗಳಿಗೆ ಪ್ರತ್ಯೇಕ ಪಥ ಬೇಕು ಎನ್ನುತ್ತಿದ್ದೀರಿ’ ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.