ADVERTISEMENT

ಅರಿವಿನ ಕೊರತೆಯಿಂದ ಧರ್ಮದ ಹೆಸರಲ್ಲಿ ಹಿಂಸೆ: ಮೋಹನ್‌ ಭಾಗವತ್

ಪಿಟಿಐ
Published 22 ಡಿಸೆಂಬರ್ 2024, 11:33 IST
Last Updated 22 ಡಿಸೆಂಬರ್ 2024, 11:33 IST
<div class="paragraphs"><p>ಮೋಹನ್‌ ಭಾಗವತ್</p></div>

ಮೋಹನ್‌ ಭಾಗವತ್

   

ಅಮರಾವತಿ: ಧರ್ಮದ ಹೆಸರಿನಲ್ಲಿ ಹಿಂಸಾಚಾರ ಮತ್ತು ದೌರ್ಜನ್ಯ ಘಟನೆಗಳು ನಡೆಯುತ್ತಿರುವುದಕ್ಕೆ ಧರ್ಮದ ಬಗ್ಗೆ ತಪ್ಪು ತಿಳಿವಳಿಕೆ ಮತ್ತು ಅರಿವಿನ ಕೊರತೆಯೇ ಕಾರಣ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಭಾನುವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಅಮರಾವತಿಯಲ್ಲಿರುವ ‘ಮಹಾನುಭವ ಆಶ್ರಮ’ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಧರ್ಮವು ಮುಖ್ಯವಾಗಿದ್ದು, ಅದನ್ನು ಸರಿಯಾಗಿ ಕಲಿಸಬೇಕಿದೆ’ ಎಂದಿದ್ದಾರೆ.

ADVERTISEMENT

‘ಏಕೆಂದರೆ, ಧರ್ಮದ ಬಗ್ಗೆ ಅರೆಬರೆ ಮತ್ತು ಅಪೂರ್ಣ ಜ್ಞಾನವು ಅಧರ್ಮಕ್ಕೆ ಕಾರಣವಾಗುತ್ತದೆ. ಇದರಿಂದಾಗಿಯೇ ಇಂದು ಧರ್ಮದ ಹೆಸರಿನಲ್ಲಿ ಜಗತ್ತಿನಾದ್ಯಂತ ಶೋಷಣೆ, ದೌರ್ಜನ್ಯ ನಡೆಯುತ್ತಿದೆ’ ಎಂದರು. 

ಧರ್ಮವು ಯಾವಾಗಲೂ ಅಸ್ತಿತ್ವದಲ್ಲಿರುತ್ತದೆ ಹಾಗೂ ಎಲ್ಲವೂ ಅದರ ಪ್ರಕಾರವೇ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿಯೇ ಧರ್ಮವನ್ನು ‘ಸನಾತನ’ ಎಂದು ಕರೆಯಲಾಗುತ್ತದೆ ಎಂದು ಪ್ರತಿಪಾದಿಸಿದ ಅವರು, ‘ಧರ್ಮದಲ್ಲಿ ಹೇಳಿದಂತೆ ನಡೆದುಕೊಳ್ಳುವುದೇ ಧರ್ಮದ ರಕ್ಷಣೆ’ ಎಂದು ತಿಳಿಸಿದರು.

ಈಚೆಗೆ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾಗವತ್, ‘ದೇಶದಲ್ಲಿ ಹೊಸದಾಗಿ ಮಂದಿರ – ಮಸೀದಿಗಳ ವಿವಾದಗಳನ್ನು ಹುಟ್ಟುಹಾಕುತ್ತಿದೆ’ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದರು.

‘ಕೆಲವು ವ್ಯಕ್ತಿಗಳು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ನಂತರ, ಅಂತಹ ವಿವಾದಗಳನ್ನು ಕೆರಳಿಸುವ ಮೂಲಕ ಹಿಂದೂಗಳ ನಾಯಕರಾಗಬಹುದೆಂದು ಭಾವಿಸಿದ್ದಾರೆ. ಆದರೆ, ಅದು ಸ್ವೀಕಾರಾರ್ಹವಲ್ಲ’ ಎಂದೂ ಅವರು ಹರಿಹಾಯ್ದಿದ್ದರು.

‘ಭಾರತ – ವಿಶ್ವಗುರು’ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದ ಅವರು, ಎಲ್ಲರನ್ನೂ ಒಳಗೊಳ್ಳುವ ಸಮಾಜದ ಅಗತ್ಯವಿದೆ. ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ಜಗತ್ತಿಗೆ ತೋರಿಸ ಬೇಕಾಗಿದೆ ಎಂದಿದ್ದರು.

ಭಾರತೀಯ ಸಮಾಜದ ಬಹುತ್ವವನ್ನು ಎತ್ತಿ ತೋರಿಸಿದ ಅವರು, ‘ರಾಮಕೃಷ್ಣ ಮಿಷನ್‌ನಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತದೆ. ನಾವು ಹಿಂದೂಗಳಾಗಿರುವುದರಿಂದ ಮಾತ್ರ ಇದನ್ನೆಲ್ಲ ವನ್ನು ಮಾಡುತ್ತಿದ್ದೇವೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.