ADVERTISEMENT

ತಮಿಳುನಾಡಿನಲ್ಲಿ ಎನ್‌ಐಎ ಶೋಧ; ಐವರ ಬಂಧನ

ಪಿಎಫ್‌ಐ ಜೊತೆ ನಂಟು ಆರೋಪ; ದಾಖಲೆ, ಡಿಜಿಟಲ್ ಸಾಕ್ಷ್ಯ, ಆಯುಧ ವಶ

ಪಿಟಿಐ
Published 9 ಮೇ 2023, 14:19 IST
Last Updated 9 ಮೇ 2023, 14:19 IST
ತಮಿಳುನಾಡಿನ ದಿಂಡಿಗಲ್‌ನಲ್ಲಿ ಮೊಹಮ್ಮದ್ ಕೈಸರ್‌ ಎಂಬಾತನನ್ನು ಎನ್‌ಎಐ ಅಧಿಕಾರಿಗಳು ಮಂಗಳವಾರ ಬಂಧಿಸಿದರು–ಪಿಟಿಐ ಚಿತ್ರ
ತಮಿಳುನಾಡಿನ ದಿಂಡಿಗಲ್‌ನಲ್ಲಿ ಮೊಹಮ್ಮದ್ ಕೈಸರ್‌ ಎಂಬಾತನನ್ನು ಎನ್‌ಎಐ ಅಧಿಕಾರಿಗಳು ಮಂಗಳವಾರ ಬಂಧಿಸಿದರು–ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ನಂಟು ಹೊಂದಿದ ಆರೋಪದ ಮೇಲೆ ತಮಿಳುನಾಡಿನ ಆರು ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಐದು ಜನರನ್ನು ಬಂಧಿಸಿದೆ.

ಚೆನ್ನೈ, ಮದುರೈ, ದಿಂಡಿಗಲ್ ಹಾಗೂ ಥೇಣಿ ಜಿಲ್ಲೆಗಳಲ್ಲಿ ಶೋಧ ನಡೆಸಲಾಗಿದೆ. ಬಂಧಿತರ ಮನೆಗಳು ಹಾಗೂ ತೋಟದ ಮನೆಗಳಲ್ಲಿ ಶೋಧ ನಡೆಸಿದ ಅಧಿಕಾರಿಗಳು, ದಾಖಲೆಗಳು, ಹರಿತವಾದ ಆಯುಧಗಳು, ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. 

ಚೆನ್ನೈನ ಅಬ್ದುಲ್ ರಜಾಕ್, ಮದುರೈನ ವಕೀಲರಾದ ಮೊಹಮ್ಮದ್ ಯೂಸುಫ್, ಎಂ. ಮೊಹಮ್ಮದ್ ಅಬ್ಬಾಸ್, ದಿಂಡಿಗಲ್‌ನ ಮೊಹಮ್ಮದ್ ಕೈಸರ್ ಹಾಗೂ ಥೇಣಿಯ ಸಾಥಿಕ್ ಅಲಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಕ್ರಿಮಿನಲ್ ಸಂಚು ಪ್ರಕರಣದಲ್ಲಿ ಕಳೆದ ವರ್ಷ ದಾಖಲಾಗಿದ್ದ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ADVERTISEMENT

‘2047ರ ಹೊತ್ತಿಗೆ ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಮಾಡುವ ಯೋಜನೆ ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿದ ಹಾಗೂ ಪಿಎಫ್‌ಐ ಸಿದ್ಧಾಂತಗಳಿಗೆ ಹೊಂದಿಕೆಯಾಗದವರನ್ನು ಮುಗಿಸಲು ಬಂಧಿತ ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಅಂಶ ತನಿಖೆಯಲ್ಲಿ ಕಂಡುಬಂದಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. 

‘ಸಂಚಿನ ಭಾಗವಾಗಿ, ತಮ್ಮ ವಿರೋಧಿಗಳನ್ನು ಕೊಲ್ಲುವ ಉದ್ದೇಶದಿಂದ ಸಾಕಷ್ಟು ಸಂಖ್ಯೆಯ ಪಿಎಫ್‌ಐ ಸದಸ್ಯರಿಗೆ ಅದರಲ್ಲೂ ಯುವಕರಿಗೆ ಆರೋಪಿಗಳು ಶಸ್ತ್ರಾಸ್ತ್ರ ತರಬೇತಿ ನೀಡಿದ್ದರು’ ಎಂದು ಹೇಳಿದ್ದಾರೆ. ಕಳೆದ ಸೆ.19ರಂದು ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಎ, 10 ಆರೋಪಿಗಳ ವಿರುದ್ಧ ಮಾ.17ರಂದು ದೋಷಾರೋಪ ಪಟ್ಟಿ ಸಲ್ಲಿಸಿತ್ತು. 

ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ಮಧ್ಯೆ ದ್ವೇಷ ಹರಡಿದ, ಕೋಮು ಸಾಮರಸ್ಯ ಕೆಡಿಸುವ ಚಟುವಟಿಕೆ ನಡೆಸಿದ, ಸಾರ್ವಜನಿಕ ಶಾಂತಿ ಹಾಳುಮಾಡುವ ಕಾನೂನುಬಾಹಿರ ಚಟುವಟಿಕೆ ನಡೆಸಿದ ಆರೋಪಗಳನ್ನು ಹೊರಿಸಲಾಗಿದೆ. ತನ್ನ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂದು ಸಂಘಟನೆ ವಿರುದ್ಧ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.