ADVERTISEMENT

ಶಾಂತಿಭಂಗದ ಸಂಚಿಗೆ ದಾಖಲೆ: ವಿವಿಧ ಜಿಲ್ಲೆಗಳ ಸೂಕ್ಷ್ಮ ಪ್ರದೇಶದಲ್ಲಿ ಬಂದೋಬಸ್ತ್‌

ಮಾಹಿತಿ ಕಲೆ ಹಾಕಿದ್ದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 22:54 IST
Last Updated 28 ಸೆಪ್ಟೆಂಬರ್ 2022, 22:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಈ ಸಂಘಟನೆಯ ಅಂಗಸಂಸ್ಥೆಗಳು ಶಾಂತಿಭಂಗಕ್ಕೆ ಸಂಚು ರೂಪಿಸಿದ ಬಗ್ಗೆ ಮಾಹಿತಿ ಹಾಗೂ ದಾಖಲೆ ದಾಳಿ ವೇಳೆ ಪತ್ತೆಯಾಗಿತ್ತು’ ಎಂದು ಗೃಹ ಇಲಾಖೆ ಹೇಳಿದೆ.

‘ಪಿಎಫ್‌ಐ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ ಡೈರಿಯಲ್ಲಿ ಸಂಘಟನೆಯ ಸಂಚು ಗೊತ್ತಾಗಿತ್ತು. ಶಾಂತಿಗೆ ಭಂಗ, ಕಾನೂನುಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಸಂಘಟನೆಗಳ ವಿರುದ್ಧ ದಾಖಲಾಗಿರುವ ಪ್ರಕರಣ, ನಡೆಸಿದ ಸಭೆ, ವಿದೇಶಿ ಮೂಲದಿಂದ ಹರಿದುಬಂದ ಹಣದ ಮಾಹಿತಿಯನ್ನೂ ಕೇಂದ್ರವು ಕಲೆ ಹಾಕಿತ್ತು’ ಎಂದೂ ಇಲಾಖೆ ವಿವರಿಸಿದೆ.

ಪಿಎಫ್‌ಐ ನಿಷೇಧಿಸಿದ ಆದೇಶ ಹೊರಬೀಳುತ್ತಿದ್ದಂತೆ,ರಾಜ್ಯದ ಸೂಕ್ಷ್ಮಪ್ರದೇಶಗಳಲ್ಲಿ ಬಂದೋಬಸ್ತ್‌ ಹೆಚ್ಚಿಸಲಾಗಿದೆ. ಆಯಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳು ತೀವ್ರ ನಿಗಾ ವಹಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್ ಸೂಚನೆ ನೀಡಿದ್ದಾರೆ.

ADVERTISEMENT

ಬೆಂಗಳೂರಿನ ಚಾಮರಾಜಪೇಟೆ, ಶಿವಾಜಿನಗರ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ, ಕೆ.ಆರ್‌.ಮಾರುಕಟ್ಟೆ ಪ್ರದೇಶದಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ. ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಿಷೇಧಿತ ಸಂಘಟನೆಗಳ ಪರವಾಗಿ ಪ್ರತಿಭಟನೆ ನಡೆಸಿದರೆ ಅವರನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದ್ದು, ಸ್ಥಳೀಯವಾಗಿ ಶಾಂತಿಸಭೆ ನಡೆಸಲು ಗೃಹ ಇಲಾಖೆ ತಿಳಿಸಿದೆ.

‘ಕೇಂದ್ರದ ಆದೇಶದಂತೆ ನಿಷೇಧಿತ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನಿಷೇಧಿತ ಸಂಘಟನೆ ಪರ ಪ್ರತಿಭಟನೆ ನಡೆಸಿದರೆ ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಗುವುದು’ ಎಂದು ಪ್ರವೀಣ್‌ ಸೂದ್ ಎಚ್ಚರಿಕೆ ನೀಡಿದ್ದಾರೆ.

‘ನಗರದಲ್ಲಿ ಕಟ್ಟೆಚ್ಚರ ವಹಿಸಲು ಎಲ್ಲ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ಆದೇಶದಂತೆ ರಾಜಧಾನಿಯಲ್ಲಿ ಬಂದೋಬಸ್ತ್‌ ಹೆಚ್ಚಿಸಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಪ್ರತಾಪ ರೆಡ್ಡಿ
ತಿಳಿಸಿದರು.

ಪಿಎಫ್‌ಐ ಕಚೇರಿಗೆ ಬೀಗ ಹಾಕಲು ಸಿದ್ಧತೆ

ರಾಜ್ಯದ ಎಲ್ಲ ಪಿಎಫ್‌ಐ ಕಚೇರಿಯಲ್ಲಿನ ದಾಖಲೆ ಸಂಗ್ರಹಿಸಿ, ಪೊಲೀಸ್ ಭದ್ರತೆಯಲ್ಲಿ ಬೀಗ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ಪ್ರಧಾನ ಕಚೇರಿ ಬಳಿ ಬುಧವಾರ ಎಸಿಪಿಯೊಬ್ಬರ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.

ನಿಷೇಧ ಅನುಷ್ಠಾನದ ಜವಾಬ್ದಾರಿ ರಾಜ್ಯ ಸರ್ಕಾರಗಳಿಗೆ: ಗೃಹ ಸಚಿವ

ಬೆಂಗಳೂರು: ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳ ಮೇಲೆ ನಿಷೇಧ ಹೇರಿರುವ ಕೇಂದ್ರ ಸರ್ಕಾರ ಅದರ ಅನುಷ್ಠಾನದ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ನಿಷೇಧದ ನಂತರದ ಪ್ರಕ್ರಿಯೆಗಳಾದ ನಿಷೇಧಕ್ಕೆ ಒಳಪಟ್ಟ ಸಂಘಟನೆಗಳ ಕಚೇರಿಗಳನ್ನು ಜಪ್ತಿ ಮಾಡುವುದು, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಕಾನೂನು ಕ್ರಮಕೈಗೊಳ್ಳುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳೇ ನಿರ್ವಹಿಸಲಿವೆ ಎಂದೂ ಅವರು ಹೇಳಿದ್ದಾರೆ.

ಕೇಂದ್ರದ ನಿರ್ದೇಶನದ ಅನ್ವಯ ರಾಜ್ಯ ಸರ್ಕಾರ ಮುಂದಿನ ಪ್ರಕ್ರಿಯೆಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ ಸುತ್ತೋಲೆ ಹೊರಡಿಸಿದೆ ಎಂದಿದ್ದಾರೆ.

ಮುಖಂಡರ ಹತ್ಯೆಯಲ್ಲಿ ಪಿಎಫ್‌ಐ ಪಾತ್ರ ಉಲ್ಲೇಖ

l ರುದ್ರೇಶ್‌(2016)

l ಪ್ರವೀಣ್‌ ಪೂಜಾರಿ(2016)

lಶರತ್‌ ಮಡಿವಾಳ(2017)

lಪ್ರವೀಣ್‌ ನೆಟ್ಟಾರು(2022)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.