ಸುಪ್ರೀಂ ಕೋರ್ಟ್
ನವದೆಹಲಿ: ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ಬಾಂಗ್ಲಾ ದೇಶದ ನಾಗರಿಕರು ಎಂಬ ಅನುಮಾನದ ಮೇಲೆ ಬಂಧಿಸಿರುವ ಕುರಿತು ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ಸಮ್ಮತಿಸಿದೆ.
ಬಂಧನಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್‌ಮಾಲಾ ಬಾಗ್ಚಿ ಅವರಿದ್ದ ನ್ಯಾಯಪೀಠವು, ಆದೇಶವು ಗಡಿಯಾಚೆಯಿಂದ ಬಂದ ಜನರ ಮೇಲೂ ವಿಶೇಷ ಪರಿಣಾಮ ಬೀರಬಹುದು ಎಂದು ತಿಳಿಸಿದೆ.
‘ವಲಸೆ ಕಾರ್ಮಿಕರು ಈಗ ಕೆಲಸ ಮಾಡುತ್ತಿರುವ ರಾಜ್ಯಗಳು ಅವರ ಮೂಲದ ಕುರಿತು ವಿಚಾರಿಸುವ ಹಕ್ಕು ಹೊಂದಿವೆ. ಸರ್ಕಾರ ಅಸ್ತಿತ್ವ ಇರದ ಸಂದರ್ಭದಲ್ಲಿ ಸಮಸ್ಯೆ ಉದ್ಭವವಾಗುತ್ತದೆ. ಈಗಲೇ ನಾವು ಮಧ್ಯಂತರ ಆದೇಶ ಪ್ರಕಟಿಸಿದರೆ, ಅದು ಪರಿಣಾಮಗಳನ್ನು ಬೀರಲಿದೆ. ಗಡಿಯಾಚೆಯಿಂದ ಅಕ್ರಮವಾಗಿ ಬಂದವರನ್ನು ಕಾನೂನಿನ ಪ್ರಕಾರ ಗಡಿಪಾರು ಮಾಡಬೇಕಾಗುತ್ತದೆ’ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಪಶ್ಚಿಮ ಬಂಗಾಳ ವಲಸೆ ಕಲ್ಯಾಣ ಮಂಡಳಿಯ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ‘ಗೃಹ ಸಚಿವಾಲಯವು ಹೊರಡಿಸಿದ ಸುತ್ತೋಲೆಯ ಪ್ರಕಾರ ಅವರು ದಾಖಲೆಗಳನ್ನು ಹೊಂದಿದ್ದಾರೆ. ಆದರೂ, ಬಂಗಾಳಿ ಮಾತನಾಡುವ ಕಾರಣಕ್ಕಾಗಿಯೇ ಹಲವು ರಾಜ್ಯಗಳಲ್ಲಿ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ವಿಚಾರಣೆ ನೆಪದಲ್ಲಿ ಅವರನ್ನು ಬಂಧಿಸಲಾಗಿದ್ದು, ಹಿಂಸಿಸಲಾಗುತ್ತಿದೆ. ಹೀಗಾಗಿ ಬಂಧಿಸದಂತೆ ಮಧ್ಯಂತರ ಆದೇಶ ಹೊರಡಿಸಬೇಕು. ವಿಚಾರಣೆ ನಡೆಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ, ಅವರನ್ನು ಬಂಧಿಸಬಾರದು’ ಎಂದು ಮನವಿ ಮಾಡಿದರು.
ಈ ಕುರಿತು ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಬಿಹಾರ, ಉತ್ತರ ಪ್ರದೇಶ, ಛತ್ತೀಸಗಢ, ಹರಿಯಾಣ, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದು, ಅಲ್ಲಿಯವರೆಗೂ ಕಾಯಬೇಕು ಎಂದು ಅರ್ಜಿದಾರರಿಗೆ ನ್ಯಾಯಪೀಠ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.