ADVERTISEMENT

ಪೂಜಾಸ್ಥಳಗಳ ಕಾಯ್ದೆ: ವಿಸ್ತೃತ ವರದಿಗೆ ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

ಪಿಟಿಐ
Published 14 ನವೆಂಬರ್ 2022, 10:51 IST
Last Updated 14 ನವೆಂಬರ್ 2022, 10:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ‘ಪ್ರಾರ್ಥನಾ ಸ್ಥಳಗಳ ಕಾಯ್ದೆ 1991’ರ ಕೆಲ ನಿಬಂಧನೆಗಳ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಡಿಸೆಂಬರ್‌ 12ರ ಒಳಗೆ ವಿಸ್ತೃತವಾದ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಪ್ರಾರ್ಥನಾ ಮತ್ತು ಪೂಜಾ ಸ್ಥಳಗಳ ಸ್ವರೂಪದ ಬದಲಾವಣೆಯನ್ನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದನ್ನು ಕಾಯ್ದೆಯ ಕೆಲ ನಿಬಂಧನೆಗಳಡಿ ನಿರ್ಬಂಧಿಸಲಾಗಿದೆ. ಇದರ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ.

ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ, ‘ತಕ್ಷಣಕ್ಕೆ ಇದಕ್ಕೆ ಉತ್ತರಿಸಲಾಗದು. ಸರ್ಕಾರದ ಜೊತೆಗೆ ಚರ್ಚಿಸಬೇಕು. ಅದಕ್ಕೆ ಸಮಯ ಬೇಕು’ ಎಂದರು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಅವರಿದ್ದ ಪೀಠವು ಇದನ್ನು ಮಾನ್ಯ ಮಾಡಿತು.

ADVERTISEMENT

ಬಳಿಕ, ‘ಡಿಸೆಂಬರ್‌ 12ರ ಒಳಗೆ ಸವಿವರ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಈ ಮಾಹಿತಿಯನ್ನು ಸಂಬಂಧಿಸಿದವರಿಗೂ ತಿಳಿಸಬೇಕು’ ಎಂದು ಕೇಂದ್ರಕ್ಕೆ ಸೂಚಿಸಿದ ಪೀಠವು, 2023ರ ಜನವರಿ ಮೊದಲ ವಾರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತು.

ಅರ್ಜಿ ಸಲ್ಲಿಸಿರುವ ರಾಜ್ಯಸಭೆ ಸದಸ್ಯ, ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಅವರು, ಅಯೋಧ್ಯೆಯ ರಾಮಮಂದಿರ ಸ್ಥಳದ ವಿವಾದದಂತೆ, ಕಾಶಿ ಮತ್ತು ಮಥುರಾ ಅನ್ನು ಈ ಕಾಯ್ದೆಯಿಂದ ಹೊರಗಿಡಲಾಗಿದೆ. ಈ ಕಾಯ್ದೆಯನ್ನೇ ರದ್ದುಪಡಿಸಬೇಕು ಎಂದು ನಾನು ಕೋರುತ್ತಿಲ್ಲ. ಉಲ್ಲೇಖಿಸಿದ ಎರಡೂ ದೇವಸ್ಥಾನಗಳನ್ನು ಕಾಯ್ದೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಉಳಿಸಿಕೊಳ್ಳಬೇಕು‘ ಎಂದು ಪೀಠಕ್ಕೆ ಮನವಿ ಮಾಡಿದರು.

ಅರ್ಜಿಯ ವಿಚಾರಣೆಯ ವೇಳೆ ಈ ಮನವಿಯನ್ನು ಪರಿಗಣಿಸಲಾಗುವುದು ಎಂದು ಪೀಠ ಪ್ರತಿಕ್ರಿಯಿಸಿತು. ಇದಕ್ಕೂ ಮೊದಲು ಪೀಠವು, ಈ ಸಂಬಂಧ ಪ್ರತಿಕ್ರಿಯೆ ದಾಖಲಿಸಲು ಅಕ್ಟೋಬರ್ 31ರವರೆಗೂ ಕೇಂದ್ರಕ್ಕೆ ಸಮಯಾವಕಾಶ ನೀಡಿತ್ತು.

ವಕೀಲ ಅಶ್ವಿನಿ ಉಪಾಧ್ಯಾಯ ಅವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಉಲ್ಲೇಖಿತ ಕಾಯ್ದೆಯ 2, 3 ಮತ್ತು 4ನೇ ಸೆಕ್ಷನ್‌ಗಳನ್ನು ಕೈಬಿಡಬೇಕು ಎಂದು ಕೋರಿದ್ದಾರೆ. ಇದು, ಪೀಠದ ಎದುರು ವಿಚಾರಣೆಯಲ್ಲಿದೆ.

‘ಯಾವುದೇ ವ್ಯಕ್ತಿ ಅಥವಾ ಧರ್ಮಕ್ಕೆ ಸೇರಿರುವ ಗುಂಪು ನಿರ್ದಿಷ್ಟ ಪ್ರಾರ್ಥನಾ ಹಾಗೂ ಪೂಜಾ ಸ್ಥಳದ ಹಕ್ಕಿಗಾಗಿ ಕೋರ್ಟ್‌ನಿಂದ ಪರಿಹಾರ ಕೋರುವ ಅವಕಾಶಗಳನ್ನು ಈ ಸೆಕ್ಷನ್‌ಗಳು ಕಸಿದುಕೊಳ್ಳಲಿವೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.