ADVERTISEMENT

ಅಮೃತಸರಕ್ಕೆ ಬಂದಿಳಿದ 116 ಮಂದಿ ಭಾರತೀಯರು

ಪಿಟಿಐ
Published 15 ಫೆಬ್ರುವರಿ 2025, 22:44 IST
Last Updated 15 ಫೆಬ್ರುವರಿ 2025, 22:44 IST
   

ಅಮೃತಸರ/ಚಂಡೀಗಢ: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ 116 ಭಾರತೀಯರನ್ನು ಹೊತ್ತ ಅಮೆರಿಕದ ವಿಮಾನವು ಶನಿವಾರ ತಡರಾತ್ರಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿವಿಧ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರದ ಭಾಗವಾಗಿ ಈ ಪ್ರಕ್ರಿಯೆ ನಡೆದಿದ್ದು, ಅಮೆರಿಕವು ವಾಪಸ್‌ ಕಳುಹಿಸಿದ ಭಾರತೀಯರ ಎರಡನೇ ತಂಡ ಇದಾಗಿದೆ. 

ರಾತ್ರಿ 10 ಗಂಟೆಗೆ ಬಂದಿಳಿಯಬೇಕಿದ್ದ ಈ ವಿಮಾನವು ಒಂದೂವರೆ ಗಂಟೆ ತಡವಾಗಿ 11:30 ರ ಸುಮಾರಿಗೆ ಬಂದಿಳಿಯಿತು ಎಂದು ಮೂಲಗಳು ಹೇಳಿವೆ.

ADVERTISEMENT

ವಿಮಾನದಲ್ಲಿ 119 ವಲಸಿಗರಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ, ಈಗ ಪರಿಷ್ಕೃತ ಪ್ರಯಾಣಿಕರ ಪಟ್ಟಿಯ ಪ್ರಕಾರ, ಎರಡನೇ ತಂಡದಲ್ಲಿ ಭಾರತಕ್ಕೆ ಬಂದವರ ಸಂಖ್ಯೆ 116 ಎಂದು ಅಧಿಕಾರಿಯೊಬ್ಬರು ಹೇಳಿದರು.

ಈ ವಿಮಾನದಲ್ಲಿ ಬಂದವರಲ್ಲಿ ಪಂಜಾಬ್‌ನ 65, ಹರಿಯಾಣದ 33, ಗುಜರಾತ್‌ನ 8, ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಿಂದ ತಲಾ ಒಬ್ಬರು ಇದ್ದಾರೆ. ಅಮೆರಿಕವು ವಾಪಸ್‌ ಕಳುಹಿಸಿದವರಲ್ಲಿ ಹೆಚ್ಚಿನವರು 18 ರಿಂದ 30 ವಯೋಮಾನದವರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕವು ಇನ್ನಷ್ಟು ಅಕ್ರಮ ವಲಸಿಗರನ್ನು ಮತ್ತೊಂದು ವಿಮಾನದ ಮೂಲಕ ಇದೇ 16ರಂದು (ಭಾನುವಾರ) ಭಾರತಕ್ಕೆ ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ. ಕಳೆದ ವಾರ 104 ಅಕ್ರಮ ವಲಸಿಗರಿದ್ದ ಅಮೆರಿಕದ ಸೇನಾ ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.