ADVERTISEMENT

ಸರ್ದಾರ್ ಪಟೇಲ್ ಪ್ರತಿಮೆ ಲೋಕಾರ್ಪಣೆ ಮಾಡಿದ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 8:45 IST
Last Updated 31 ಅಕ್ಟೋಬರ್ 2018, 8:45 IST
   

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮುಂಜಾನೆ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯ ಸಮೀಪ ಸ್ಥಾಪಿಸಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಈ ಪ್ರತಿಮೆಯು 182 ಮೀಟರ್ ಎತ್ತರವಿದೆ. ಅ.31 ಸರ್ದಾರ್ ಪಟೇಲರ 143ನೇ ಹುಟ್ಟುಹಬ್ಬವೂಹೌದು.

ನರ್ಮದಾ ನದಿಯ ದಡದ ಮೇಲೆಉದ್ಘಾಟನಾ ಸಮಾರಂಭ ನಡೆಯಿತು. ಗಂಗೆ, ಯಮುನಾ ಮತ್ತು ಬ್ರಹ್ಮಪುತ್ರ ಸೇರಿ 30 ಪವಿತ್ರ ನದಿಗಳ ನೀರು ಸಂಗ್ರಹಿಸಿದ್ದ ಕಲಶದಿಂದ ಪ್ರತಿಮೆಗೆ ಮೋದಿ ಅಭಿಷೇಕ ಮಾಡಿದರು.

ಪ್ರತಿಮೆಯನ್ನು ದೇಶಕ್ಕೆ ಸಮರ್ಪಿಸಿದ ನಂತರ ಮಾತನಾಡಿ, ಭಾರತದ ಅಸ್ಮಿತೆಗಾಗಿ ಶ್ರಮಿಸಿದ ಮೇರು ವ್ಯಕ್ತಿತ್ವಕ್ಕೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ. ಇದು ದೇಶದ ಇತಿಹಾಸದ ಸಾರ್ಥಕ ಕ್ಷಣ ಎಂದು ಬಣ್ಣಿಸಿದರು.

ADVERTISEMENT

‘ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಕನಸು ಕಂಡಿದ್ದೆ. ದೇಶದ ಲಕ್ಷಾಂತರ ಜನರು ನನ್ನೊಡನೆ ಕೈಜೋಡಿಸಿದರು. ಅವರು ಬಳಸಿದ ಹಳೆದಯ ಕೃಷಿ ಉಪಕರಣಗಳಿಂದ ಕಬ್ಬಿಣ ಕೊಟ್ಟಿದ್ದರು. ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣ ವಿಚಾರ ಸಾಮೂಹಿಕ ಚಳವಳಿಯೇ ಆಗಿತ್ತು’ ಎಂದು ನೆನಪಿಸಿಕೊಂಡರು.

ಪ್ರತಿಮೆ ನಿರ್ಮಾಣಕ್ಕೆ ಒಟ್ಟು ₹2389 ಕೋಟಿ ಖರ್ಚಾಗಿದೆ. 1947ರಲ್ಲಿದೇಶ ವಿಭಜನೆಯ ನಂತರ ದೇಶದಲ್ಲಿ ಏಕತೆ ಕಾಪಾಡಲು ಶ್ರಮಿಸಿದ ಮೊದಲ ಗೃಹ ಸಚಿವರಿಗೆ ಈ ಮೂಲಕ ಗೌರವ ಸಲ್ಲಿಸಲಾಗಿದೆ. ಮೋದಿ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ವಾಯುಪಡೆಯ ಮೂರು ವಿಮಾನಗಳು ಪ್ರತಿಮೆಯ ಸಮೀಪ ಹಾರಾಡಿ ಆಗಸದಲ್ಲಿ ತ್ರಿವರ್ಣದ ರಂಗು ಮೂಡಿಸಿದವು.

ವಡೋದರದಲ್ಲಿ ವಾಸವಿರುವ ಸರ್ದಾರ್ ಪಟೇಲ್ ವಂಶಸ್ಥ ಧಿರುಭಾಯ್, ‘ಇದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಕ್ಷಣ’ ಎಂದು ಸರ್ಕಾರವನ್ನು ಅಭಿನಂದಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಸರ್ದಾರ್ ಪಟೇಲರಿಗೆ ಪುಷ್ಟನಮನ ಸಲ್ಲಿಸಿದರು. ಇಂಡಿಯಾ ಗೇಟ್‌ನಲ್ಲಿ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಜೊತೆಗೂಡಿ ರಾಜನಾಥ್ ಸಿಂಗ್ ಏಕತಾ ಓಟಕ್ಕೆ ಚಾಲನೆ ನೀಡಿದರು.

ಚೆನ್ನೈ, ಗುವಾಹತಿ ಮತ್ತು ಭುವನೇಶ್ವರ ಸೇರಿದಂತೆ ದೇಶದ ವಿವಿಧೆಡೆ ಏಕತಾ ಓಟ ನಡೆಯಿತು.ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.