ADVERTISEMENT

‘ಕತೆಗಾರ’ರಿಗೆ ಪ್ರಧಾನಿ ಮೋದಿ ಶ್ಲಾಘನೆ

ಬೆಂಗಳೂರಿನ ಸ್ಟೋರಿ ಟೆಲ್ಲಿಂಗ್‌ ಸೊಸೈಟಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 19:51 IST
Last Updated 27 ಸೆಪ್ಟೆಂಬರ್ 2020, 19:51 IST
ಮೋದಿ
ಮೋದಿ   

ನವದೆಹಲಿ: ಬೆಂಗಳೂರಿನ ಸ್ಟೋರಿ ಟೆಲ್ಲಿಂಗ್‌ ಸೊಸೈಟಿ ಹಾಗೂ ಇಂಥ ಇತರ ಕೆಲವು ಸಂಸ್ಥೆಗಳ ಕಾರ್ಯಕ್ರಮಗಳ ಬಗ್ಗೆ ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸ್ಟೋರಿ ಟೆಲ್ಲಿಂಗ್‌ ಸೊಸೈಟಿಯ ಸದಸ್ಯರ ಜತೆಗೆ ಸಂವಾದವನ್ನೂ ಅವರು ನಡೆಸಿದರು.

ಸಾಫ್ಟ್‌ವೇರ್‌ ಉದ್ಯೋಗಿಯಾಗಿ, ಈಗ ಕತೆ ಹೇಳುವ ಕಾಯಕದಲ್ಲಿ ತೊಡಗಿರುವ ಸೊಸೈಟಿಯ ಸಂಸ್ಥಾಪಕಿ ಅಪರ್ಣಾ ಅತ್ರೇಯ, ಇತರ ಸದಸ್ಯರಾದ ಶೈಲಜಾ ಸಂಪತ್‌, ಸ್ವಾಮಿ ಶ್ರೀನಿವಾಸ, ಲಾವಣ್ಯಾ ಪ್ರಸಾದ್‌ ಹಾಗೂ ಅಪರ್ಣಾ ಜೈಶಂಕರ್‌ ಅವರ ಜತೆ ಪ್ರಧಾನಿ ಸಂವಾದ ನಡೆಸಿದರು.

ADVERTISEMENT

ಕಥೆ ಹೇಳುವ ಕಲೆಯನ್ನು ಪುನರುಜ್ಜೀವನಗೊಳಿಸಿ, ಪೋಷಿಸಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 2013ರಲ್ಲಿ ‘ಸ್ಟೋರಿ ಟೆಲ್ಲಿಂಗ್‌ ಸೊಸೈಟಿ’ಯನ್ನು ಆರಂಭಿಸಲಾಗಿತ್ತು. ಕಥೆ ಹೇಳುವ ಕಲೆಗೆ ಸಂಬಂಧಿಸಿದ ಹಲವು ಕಾರ್ಯಾಗಾರಗಳು, ಉತ್ಸವಗಳನ್ನು ಈ ಸಂಸ್ಥೆಯು ಆಯೋಜಿಸುತ್ತಾ ಬಂದಿದೆ. ಇದೇ ಉದ್ದೇಶದ ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳ ಜತೆಗೆ ಈ ಸೊಸೈಟಿಯು ಸಂಪರ್ಕ ಹೊಂದಿದ್ದು, ಸಾಂಸ್ಕೃತಿಕ ಆದಾನ ಪ್ರದಾನವನ್ನು ನಡೆಸುತ್ತಿದೆ.

ಬೆಂಗಳೂರು ನಿವಾಸಿ, ಐಐಎಂ ಅಹಮದಾಬಾದ್‌ನ ಹಳೆವಿದ್ಯಾರ್ಥಿ, ಅಮರ್‌ ವ್ಯಾಸ್‌ ಅವರು ಆರಂಭಿಸಿದ ‘ಗಾಥಾಸ್ಟೋರಿ.ಇನ್‌’ ಸಂಸ್ಥೆಯನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ‘ವ್ಯಾಸ್ ಅವರು ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ಮಾಡಿದ್ದರೂ ಭಾರತಕ್ಕೆ ಮರಳಿ ಈ ವೆಬ್‌ಸೈಟ್‌ ಆರಂಭಿಸಿದ್ದಾರೆ’ ಎಂದು ಮೋದಿ ಹೇಳಿದರು.

ಮಹಾತ್ಮಾ ಗಾಂಧಿ ಕುರಿತ ಕತೆಗಳನ್ನು ಹೇಳುವಲ್ಲಿ ವಿಶೇಷ ಉತ್ಸಾಹ ತೋರುತ್ತಿರುವ ಬೆಂಗಳೂರಿನ ವಿಕ್ರಂ ಶ್ರೀಧರ್‌ ಅವರ ಹೆಸರನ್ನೂ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.