ADVERTISEMENT

ಅದಾನಿ ಸಮೂಹ ಕುರಿತು ಜೆಪಿಸಿ ತಡೆಗೆ ಪ್ರಧಾನಿ ತಂತ್ರ: ಕಾಂಗ್ರೆಸ್ ಆರೋಪ

ಪಿಟಿಐ
Published 13 ಮಾರ್ಚ್ 2023, 16:12 IST
Last Updated 13 ಮಾರ್ಚ್ 2023, 16:12 IST
ಜೈರಾಂ ರಮೇಶ್
ಜೈರಾಂ ರಮೇಶ್   

ನವದೆಹಲಿ: ಉದ್ಯಮಿ ವಿನೋದ್ ಅದಾನಿ ಒಡೆತನದ ಶೆಲ್ ಕಂಪನಿಗಳ ಜಾಲದ ಅಪಾರದರ್ಶಕ ಹಣಕಾಸು ವಹಿವಾಟಿನ ಕುರಿತು ಸಂಸತ್ತಿನಲ್ಲಿ ಸೋಮವಾರ ಹೊಸ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್, ಈ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿಯ ತನಿಖೆಯನ್ನು ಪ್ರಸ್ತಾಪಿಸದಂತೆ, ಸದನವನ್ನು ಮುಂದೂಡಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪರ ಬೊಬ್ಬೆ ಹೊಡೆಯುವವರ ನೆರವು ಪಡೆದಿದ್ದಾರೆ ಎಂದು ಆರೋಪಿಸಿದೆ. ‌

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಮಾತನಾಡಿ, ‘ತಮ್ಮ ಹಿರಿಯ ಸಹೋದರ ವಿನೋದ್ ಅದಾನಿ ಗುಂಪು ನಿರ್ವಹಣೆ ಮತ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗಿಯಾಗಿಲ್ಲ ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದು, ಅವ್ಯವಹಾರಗಳ ಕುರಿತ ಪ್ರಶ್ನೆಗಳನ್ನು ಪದೇಪದೇ ತಳ್ಳಿಹಾಕಿದ್ದಾರೆ. ಆದರೆ, ಇತ್ತೀಚಿನ ನಿದರ್ಶನಗಳು ಇದು ಸುಳ್ಳೆಂದು ಹೇಳಿವೆ’ ಎಂದಿದ್ದಾರೆ. ‌

ಈ ಬಗ್ಗೆ ಟ್ವೀಟ್ ಮಾಡಿರುವ ಜೈರಾಂ ರಮೇಶ್ ‘ಸಂಸತ್ತಿನಲ್ಲಿ ಅದಾನಿ ಸಮೂಹದ ಹಗರಣದ ಕುರಿತು ಜೆಪಿಸಿಗೆ ಬೇಡಿಕೆ ಬರದಂತೆ ಸಂಸತ್ತನ್ನು ಮುಂದೂಡಲು ಪ್ರಧಾನಿ ಅವರು ತಮ್ಮ ಪರ ಬೊಬ್ಬೆ ಹಾಕುವವರ ನೆರವು ಪಡೆದಿದ್ದಾರೆ’ ಎಂದೂ ಆರೋಪಿಸಿದ್ದಾರೆ.

ADVERTISEMENT

ಕಾಂಗ್ರೆಸ್ ‘ಹಮ್ ಅದಾನಿ ಕೆ ಹೈ ಕೌನ್‌’ ಸರಣಿಯ ಭಾಗವನ್ನು ಮುಂದುವರಿಸಿದ್ದು, ಇದರ ಭಾಗವಾಗಿ ಪ್ರಧಾನಿ ಮತ್ತು ಅವರ ಪಕ್ಷಕ್ಕೆ ಮೂರು ಪ್ರಶ್ನೆಗಳನ್ನೂ ಮುಂದಿಟ್ಟಿದೆ.

‘ವಿನೋದ್ ಅದಾನಿ ಅವರು ಶೆಲ್ ಕಂಪನಿಗಳ ನೆಟ್‌ವರ್ಕ್‌ನಲ್ಲಿ ತೊಡಗಿಸಿರುವ ಹಣಕಾಸು ವ್ಯವಹಾರಗಳು ಅಪಾರದರ್ಶಕವಾಗಿವೆ. ‌ಶೆಲ್ ಕಂಪನಿಯು ಒಂದು ವರ್ಷದಲ್ಲಿ ₹ 51,400 ಕೋಟಿ ಆದಾಯ ತೋರಿಸಿದ್ದರೆ, ಮುಂದಿನ ವರ್ಷದಲ್ಲಿ ಶೂನ್ಯ ಆದಾಯವನ್ನು ಹೇಗೆ ಹೊಂದಿತು. ಈ ಹಣ ಎಲ್ಲಿಂದ ಬರುತ್ತಿದೆ ಮತ್ತು ಎಲ್ಲಿಗೆ ಹೋಗುತ್ತಿದೆ ಎಂದು ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳು ಎಂದಾದರೂ ತನಿಖೆ ನಡೆಸುತ್ತವೆಯೇ?’ ಎಂದೂ ಜೈರಾಂ ಕೇಳಿದ್ದಾರೆ.

ಈ ಬಗ್ಗೆ ಪ್ರಧಾನಿ ಅವರು ತಮ್ಮ ಮೌನ ಮುರಿಯಬೇಕೆಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.