ADVERTISEMENT

ಕೇರಳ: ಚರ್ಚ್‌ನ ಎರಡು ಗುಂಪುಗಳೊಂದಿಗೆ ಪ್ರಧಾನಿ ಚರ್ಚೆ

ಸಿರಿಯನ್‌ ಚರ್ಚ್‌ನ ಸ್ವತ್ತುಗಳ ಒಡೆತನ ವಿವಾದ

ಪಿಟಿಐ
Published 29 ಡಿಸೆಂಬರ್ 2020, 16:40 IST
Last Updated 29 ಡಿಸೆಂಬರ್ 2020, 16:40 IST
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)   

ಕೊಚ್ಚಿ: ಆಸ್ತಿಗಳ ಹಂಚಿಕೆ ವಿಷಯಕ್ಕೆ ಸಂಬಂಧಿಸಿದ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಕೊಚ್ಚಿ ಮೂಲದ ಸಿರಿಯನ್‌ ಚರ್ಚ್‌ನ ಎರಡು ಗುಂಪುಗಳ ಪ್ರತಿನಿಧಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚರ್ಚೆ ನಡೆಸಿದರು.

2017ರಲ್ಲಿ ಸುಪ್ರಿಂಕೋರ್ಟ್‌ ನೀಡಿದ ತೀರ್ಪಿನ ಅನುಸಾರ, ಚರ್ಚ್‌ಗಳು ಹಾಗೂ ಆಸ್ತಿಗಳು ಸೇರಿದಂತೆ 1,000ಕ್ಕೂ ಅಧಿಕ ಸ್ವತ್ತುಗಳ ಒಡೆತನದ ಹಂಚಿಕೆ ಆಗಬೇಕು. ಈ ವಿಷಯವೇ ಜಾಕೋಬಿಯನ್ ಸಿರಿಯನ್‌ ಚರ್ಚ್‌ ಹಾಗೂ ಮಲಂಕರ ಆರ್ಥೋಡಾಕ್ಸ್‌ ಸಿರಿಯನ್‌ ಚರ್ಚ್‌ ನಡುವೆ ವಿವಾದಕ್ಕೆ ಕಾರಣವಾಗಿದೆ.

ಕೇರಳ ಸಿರಿಯನ್‌ ಚರ್ಚ್‌ನ ಪ್ರತಿನಿಧಿಗಳೊಂದಿಗೆ ಸೋಮವಾರ ಒಂದು ಸುತ್ತಿನ ಚರ್ಚೆ ನಡೆಸಿದ್ದ ಪ್ರಧಾನಿ, ಮಂಗಳವಾರ ಜಾಕೋಬಿಯನ್ ಸಿರಿಯನ್‌ ಚರ್ಚ್‌ನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಮಿಜೋರಾಂ ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರು ಈ ಸಭೆಯನ್ನು ಆಯೋಜಿಸಿದ್ದರು.

ADVERTISEMENT

ಪ್ರಧಾನಿ ಜೊತೆ ಚರ್ಚೆ ನಡೆಸಿದ ನಂತರ ಎರಡೂ ಗುಂಪಿನ ಪ್ರತಿನಿಧಿಗಳು, ಇಲ್ಲಿನ ಮಿಜೋರಾಂ ಭವನದಲ್ಲಿ ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು.

‘ನಮ್ಮ ಅನುಯಾಯಿಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನಿರಾಕರಿಸಲಾಗುತ್ತಿದೆ. ಪ್ರಾರ್ಥನೆ ಸಲ್ಲಿಸಲು ಸಹ ಅವಕಾಶ ನೀಡದೇ ಅನ್ಯಾಯವೆಸಗಲಾಗುತ್ತಿದೆ ಎಂಬುದನ್ನು ಪ್ರಧಾನಿ ಗಮನಕ್ಕೆ ತರಲಾಯಿತು’ ಎಂದು ಜಾಕೋಬಿಯನ್‌ ಸಿರಿಯನ್‌ ಚರ್ಚ್‌ನ ಪ್ರತಿನಿಧಿಗಳು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಶ್ರದ್ಧೆ–ಧಾರ್ಮಿಕ ನಂಬಿಕೆಯಂಥ ವಿಷಯಗಳಿಗೆ ಸಂಬಂಧಿಸಿದ ವಿವಾದಗಳಿಗೆ ಕಾನೂನು ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳುವುದು ಕಷ್ಟ. ಹೀಗಾಗಿ ಈ ವಿಷಯದಲ್ಲಿ ಪ್ರಧಾನಿಯವರ ಮಧ್ಯಪ್ರವೇಶ ಮಹತ್ವದ್ದು’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ನಮ್ಮ ಅಹವಾಲನ್ನು ಸಹ ಪ್ರಧಾನಿ ಸಹಾನುಭೂತಿಯಿಂದ ಆಲಿಸಿದ್ದಾರೆ. ನಮ್ಮ ಚರ್ಚ್‌ನ ಇತಿಹಾಸ, ಪರಂಪರೆ ಕುರಿತಂತೆ ಅವರಿಗೆ ಅರಿವೂ ಇದೆ. ಹೀಗಾಗಿ ಸುಪ್ರೀಂಕೋರ್ಟ್‌ನ ತೀರ್ಪಿನ ಅನುಸಾರವೇ ಅವರು ಸಂಧಾನ ಸೂತ್ರ ರಚಿಸುವರು ಎಂಬ ಭರವಸೆ ಇದೆ’ ಎಂದು ಮಲಂಕರ ಆರ್ಥೋಡಾಕ್ಸ್‌ ಚರ್ಚ್‌ನ ಪ್ರತಿನಿಧಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.