ನವದೆಹಲಿ: ‘ಮನೆ ಮನೆಯಲ್ಲೂ ತಿರಂಗಾ’ ಅಭಿಯಾನ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಮನವಿಯನ್ನು ಟೀಕಿಸಿರುವ ಕಾಂಗ್ರೆಸ್, ‘ತಮ್ಮ ಸೈದ್ಧಾಂತಿಕ ಬಂಧುಗಳು ಎಂದೋ ಕೈಬಿಟ್ಟಿರುವ ರಾಷ್ಟ್ರೀಯ ಸಂಕೇತವೊಂದನ್ನು ಮೋದಿ ಅವರು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಹೇಳಿದೆ.
‘ಮನೆ ಮನೆಯಲ್ಲೂ ತಿರಂಗಾ’ (ಹರ್ ಘರ್ ತಿರಂಗಾ) ಅಭಿಯಾನವನ್ನು ಸ್ಮರಣೀಯವಾದ ಸಾಮೂಹಿಕ ಅಭಿಯಾನವನ್ನಾಗಿಸಬೇಕು ಎಂದು ಮೋದಿ ಅವರು ಶುಕ್ರವಾರ ಕರೆ ನೀಡಿದ್ದಾರೆ. ಎಕ್ಸ್ ವೇದಿಕೆಯಲ್ಲಿ ರಾಷ್ಟ್ರಧ್ವಜವನ್ನು ತಮ್ಮ ಖಾತೆಯ ಪ್ರೊಫೈಲ್ ಚಿತ್ರವನ್ನಾಗಿಸಿಕೊಂಡಿದ್ದಾರೆ, ದೇಶದ ಎಲ್ಲರೂ ಇದೇ ರೀತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
‘ಹರ್ ಘರ್ ತಿರಂಗಾ’ ಅಭಿಯಾನವನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್ ಅವರು ಎಕ್ಸ್ ಮೂಲಕ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದು, ಅದನ್ನು ‘ತ್ರಿವರ್ಣ ಧ್ವಜದೊಂದಿಗಿನ ಆರ್‌ಎಸ್‌ಎಸ್ ಸಂಬಂಧದ ಕಿರು ಇತಿಹಾಸ’ ಎಂದು ಕರೆದಿದ್ದಾರೆ.
‘ಆರ್‌ಎಸ್‌ಎಸ್‌ನ ಎರಡನೆಯ ಮುಖ್ಯಸ್ಥ ಎಂ.ಎಸ್. ಗೊಳವಲ್ಕರ್ ಅವರು ತಮ್ಮ ಬಂಚ್ ಆಫ್ ಥಾಟ್ಸ್ ಕೃತಿಯಲ್ಲಿ, ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಿದ ಕಾಂಗ್ರೆಸ್ ತೀರ್ಮಾನವನ್ನು ಟೀಕಿಸಿದ್ದರು... ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್, ತ್ರಿವರ್ಣ ಧ್ವಜವನ್ನು ಹಿಂದೂಗಳು ಎಂದಿಗೂ ಗೌರವಿಸುವುದಿಲ್ಲ, ಅದನ್ನು ತಮ್ಮದಾಗಿಸಿಕೊಳ್ಳುವುದಿಲ್ಲ ಎಂದು 1947ರಲ್ಲಿ ಬರೆದಿತ್ತು...’ ಎಂದು ಎಕ್ಸ್ ಬರಹದಲ್ಲಿ ಜೈರಾಂ ಹೇಳಿದ್ದಾರೆ.
‘ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣ ಮಾತ್ರವೇ ಇರಬೇಕಿತ್ತು. ಇತರ ಬಣ್ಣಗಳು ಕೋಮು ಆಲೋಚನೆಯನ್ನು ಪ್ರತಿನಿಧಿಸುತ್ತವೆ’ ಎಂದು 2015ರಲ್ಲಿ ಆರ್‌ಎಸ್‌ಎಸ್ ಹೇಳಿತ್ತು ಎಂದು ಕೂಡ ಜೈರಾಂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.