ನವದೆಹಲಿ: ಯುವ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ₹62 ಸಾವಿರ ಕೋಟಿ ವೆಚ್ಚದ ವಿವಿಧ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅನಾವರಣ ಮಾಡಲಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ಕೇಂದ್ರ ಸರ್ಕಾರ ಪ್ರಾಯೋಜಕತ್ವದ ₹60 ಸಾವಿರ ಕೋಟಿ ಹೂಡಿಕೆಯ ‘ಪಿಎಂ–ಸೇತು’ (ಉನ್ನತೀಕರಿಸಿದ ಐಟಿಐಗಳ ಮೂಲಕ ಪ್ರಧಾನ ಮಂತ್ರಿ ಕೌಶಲ ಹಾಗೂ ಉದ್ಯೋಗದ ರೂಪಾಂತರ) ಯೋಜನೆಗೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
‘ಇದರ ಅನ್ವಯ, ದೇಶದ ಒಂದು ಸಾವಿರ ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಪ್ರತಿ ಘಟಕವೂ ಅತ್ಯಾಧುನಿಕ ಮೂಲಸೌಕರ್ಯ, ಆಧುನಿಕ ವ್ಯಾಪಾರ ಪದ್ಧತಿ, ಡಿಜಿಟಲ್ ಕಲಿಕಾ ವ್ಯವಸ್ಥೆ ಹಾಗೂ ಇನ್‌ಕ್ಯುಬೇಶನ್ ಸೌಕರ್ಯವನ್ನು ಒಳಗೊಂಡಿರಲಿದೆ. ಮಾರುಕಟ್ಟೆ ಬೇಡಿಕೆ ಆಧರಿಸಿ ಕಲಿಕಾರ್ಥಿಗಳಿಗೆ ಕೌಶಲ ಕಲಿಸಿಕೊಡಲಾಗುತ್ತದೆ. ಇದಲ್ಲದೇ, ನಾವೀನ್ಯ ಕೇಂದ್ರಗಳು, ತರಬೇತಿ ವ್ಯವಸ್ಥೆ, ಉತ್ಪಾದನಾ ಘಟಕ ಹಾಗೂ ಸ್ಥಳ ನಿಯುಕ್ತಿ ಸೇವೆಯೂ ಇರಲಿದೆ’ ಎಂದು ಪಿಎಂಒ ತಿಳಿಸಿದೆ.
‘ಪಿಎಂ–ಸೇತು’ ಯೋಜನೆಯು ಐಟಿಐ ಕಲಿಕಾ ಪರಿಸರ ವ್ಯವಸ್ಥೆಯನ್ನೇ ಮರು ವ್ಯಾಖ್ಯಾನಿಸಲಿದೆ. ವಿಶ್ವಬ್ಯಾಂಕ್ ಹಾಗೂ ಏಷ್ಯನ್ ಡೆವಲಪ್‌ಮೆಂಟ್ ಆರ್ಥಿಕ ಸಹಕಾರದೊಂದಿಗೆ ಸರ್ಕಾರ ಒಡೆತನದ ಸಂಸ್ಥೆಗಳನ್ನು ಕೈಗಾರಿಕಾ ಸಂಸ್ಥೆಗಳು ನಿರ್ವಹಣೆ ಮಾಡಲಿವೆ’ ಎಂದು ತಿಳಿಸಲಾಗಿದೆ.
‘ಮೊದಲ ಹಂತದಲ್ಲಿ ಬಿಹಾರದ ದರ್ಭಂಗ ಹಾಗೂ ಪಟ್ನಾದ ಐಟಿಐ ಕೇಂದ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ದೇಶದ 34 ರಾಜ್ಯ ಹಾಗೂ ಕೇಂದ್ರಾಡಳಿತ ಪ‍್ರದೇಶದಲ್ಲಿರುವ 400 ನವೋದಯ ವಿದ್ಯಾಲಯ ಹಾಗೂ 200 ಏಕಲವ್ಯ ಮಾದರಿ ವಸತಿಶಾಲೆಗಳಲ್ಲಿ ನಿರ್ಮಿಸಲಾದ 1,200 ವೃತ್ತಿಪರ ಕೌಶಲ ಕೇಂದ್ರಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಬಿಹಾರದಲ್ಲಿ ಲೋಕಾರ್ಪಣೆಯಾಗಲಿರುವ ಯೋಜನೆಗಳ ವಿವರ:
*‘ಮುಖ್ಯಮಂತ್ರಿ ನಿಶ್ಚಯ್ ಸ್ವಯಂ ಸಹಾಯತಾ ಭತ್ತಾ’ (ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯತೆ ಭತ್ಯೆ) ಯೋಜನೆಗೆ ಚಾಲನೆ–ಬಿಹಾರದ 5 ಲಕ್ಷ ಪದವೀಧರರಿಗೆ ಮಾಸಿಕ ₹1 ಸಾವಿರ ನೆರವು, ಉಚಿತ ಕೌಶಲ ತರಬೇತಿ ವ್ಯವಸ್ಥೆ
*ಬಿಹಾರದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಅಕಾಡೆಮಿಕ್, ಸಂಶೋಧನಾ ಕೇಂದ್ರಗಳ ಸ್ಥಾಪನೆ
*ಪಟ್ನಾದಲ್ಲಿ ಹೊಸತಾಗಿ ನಿರ್ಮಿಸಿದ ಎನ್‌ಐಟಿ ಕ್ಯಾಂಪಸ್ ಲೋಕಾರ್ಪಣೆ
* 4 ಸಾವಿರ ಮಂದಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ವಿತರಣೆ
* ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ₹450 ಕೋಟಿ ವಿದ್ಯಾರ್ಥಿವೇತನ ವಿತರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.