ಅಕ್ರಾ,: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಘಾನಾ ದೇಶದ ರಾಷ್ಟ್ರೀಯ ಪ್ರಶಸ್ತಿ 'ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ' ಪ್ರದಾನ ಮಾಡಿ ಗೌರವಿಸಲಾಗಿದೆ. ಅವರ ‘ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವ’ಕ್ಕಾಗಿ ಈ ಗೌರವ ನೀಡಲಾಗಿದೆ ಎಂದು ಘಾನಾ ಪ್ರಕಟಣೆಯಲ್ಲಿ ತಿಳಿಸಿದೆ.
ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮ ಅವರು ಮೋದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ಪ್ರಶಸ್ತಿಗೆ ಭಾಜನರಾಗಿದ್ದು, ಗೌರವದ ವಿಷಯ’ಎಂದು ಪ್ರಧಾನಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ಈ ಪ್ರಶಸ್ತಿಯು ತಮಗೆ ಅತ್ಯಂತ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದು ಹೇಳಿದರು.
‘140 ಕೋಟಿ ಭಾರತೀಯರ ಪರವಾಗಿ ನಾನು ವಿನಮ್ರವಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ’ಎಂದು ಅವರು ಹೇಳಿದ್ದಾರೆ.
ಈ ಪ್ರಶಸ್ತಿಯನ್ನು ಎರಡೂ ದೇಶಗಳ ಯುವಕರ ಆಕಾಂಕ್ಷೆಗಳು ಮತ್ತು ಉಜ್ವಲ ಭವಿಷ್ಯ, ಅವರ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ವೈವಿಧ್ಯತೆ ಹಾಗೂ ಘಾನಾ ಮತ್ತು ಭಾರತದ ನಡುವಿನ ಐತಿಹಾಸಿಕ ಸಂಬಂಧಗಳಿಗೆ ಅರ್ಪಿಸುತ್ತೇನೆ ಎಂದರು.
ಈ ಗೌರವವು ಬಲವಾದ ಭಾರತ-ಘಾನಾ ಸ್ನೇಹಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುವ ಒಂದು ಜವಾಬ್ದಾರಿಯೂ ಆಗಿದೆ. ಭಾರತವು ಯಾವಾಗಲೂ ಘಾನಾದ ಜನರೊಂದಿಗೆ ನಿಲ್ಲುತ್ತದೆ ಮತ್ತು ವಿಶ್ವಾಸಾರ್ಹ ರಾಷ್ಟ್ರಮತ್ತು ಅಭಿವೃದ್ಧಿ ಪಾಲುದಾರ ರಾಷ್ಟ್ರವಾಗಿ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.