
ಮಾಲದಾ: ಪಶ್ಚಿಮ ಬಂಗಾಳದ ಮಾಲದಾ ಪಟ್ಟಣದಿಂದ ದೇಶದ ಮೊದಲ 'ವಂದೇ ಭಾರತ್ ಸ್ಲೀಪರ್ ರೈಲಿ'ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹಸಿರು ನಿಶಾನೆ ತೋರಿದರು. ಈ ರೈಲು ಪಶ್ಚಿಮ ಬಂಗಾಳದ ಹೌರಾ ಮತ್ತು ಗುವಾಹಟಿ (ಕಾಮಾಖ್ಯ) ನಡುವೆ ಸಂಚರಿಸಲಿದೆ.
ರೈಲಿನೊಳಗೆ ಮೋದಿ ಅವರು ಮಕ್ಕಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಆಧುನಿಕ ಭಾರತದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸಲು ಸಂಪೂರ್ಣ ಹವಾನಿಯಂತ್ರಿತ (ಎಸಿ) ವಂದೇ ಭಾರತ್ ಸ್ಲೀಪರ್ ರೈಲನ್ನು ಪ್ರಯಾಣಿಕರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಕಡಿಮೆ ದರದಲ್ಲಿ ವಿಮಾನಯಾನ ಪ್ರಯಾಣದ ಅನುಭವವನ್ನು ನೀಡುತ್ತದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ರೈಲು ದೂರದ ಪ್ರಯಾಣವನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಹೆಚ್ಚು ಅನುಕೂಲಕರವಾಗಿಸುತ್ತದೆ ಎಂದು ತಿಳಿಸಿದೆ.
ಅಲ್ಲದೇ ಈ ರೈಲು ಹೌರಾ ಮತ್ತು ಗುವಾಹಟಿ ಮಾರ್ಗದ ಪ್ರಯಾಣವನ್ನು ಸುಮಾರು 2.5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಜತೆಗೆ ಧಾರ್ಮಿಕ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮಾಲದಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ಸಂಪರ್ಕವನ್ನು ಬಲಪಡಿಸುವ ಉದ್ದೇಶ ಹೊಂದಿರುವ ₹3,250 ಕೋಟಿ ಮೊತ್ತದ ವಿವಿಧ ರೈಲ್ವೆ ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು.
ಪೂರ್ವ ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಬಂದಿರುವ ಮೋದಿ ಅವರು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ಮೂಲಸೌಕರ್ಯಗಳನ್ನು ಉದ್ಘಾಟಿಸಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.