ADVERTISEMENT

ಮೋದಿಗೆ ಸಾಟಿಯೇ ಇಲ್ಲ: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 18:29 IST
Last Updated 8 ಮಾರ್ಚ್ 2019, 18:29 IST
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅರುಣ್‌ ಜೇಟ್ಲೆ ಮತ್ತು ರಾಜ್ಯವರ್ಧನ್‌ ಸಿಂಗ್ ರಾಥೋಡ್‌ ಇದ್ದರು
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅರುಣ್‌ ಜೇಟ್ಲೆ ಮತ್ತು ರಾಜ್ಯವರ್ಧನ್‌ ಸಿಂಗ್ ರಾಥೋಡ್‌ ಇದ್ದರು   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಎದುರಲ್ಲಿ ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್‌ ಅವರೇ ಪರಕೀಯ ಭಾವ ಅನುಭವಿಸಿದ್ದರು’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಬಣ್ಣಿಸಿದರು.

ಮೋದಿ ಅವರ ಆಯ್ದ ಭಾಷಣಗಳನ್ನು ಒಳಗೊಂಡಿರುವ ‘ಸಬ್‌ಕಾ ಸಾತ್, ಸಬ್‌ಕಾ ವಿಕಾಸ್’ ಪುಸ್ತಕದ ಐದು ಸಂಚಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಮೋದಿ ಅವರ ಅನುಭವ ಮತ್ತು ತಿಳಿವಳಿಕೆ ಅಪಾರವಾದುದು. ಸಾಮಾನ್ಯ ರಾಜಕೀಯ ನಾಯಕರು ಈ ವಿಚಾರದಲ್ಲಿ ಮೋದಿಗೆ ಸಾಟಿಯೇ ಅಲ್ಲ. ಮೋದಿ ಅವರ ನಾಯಕತ್ವ ಮತ್ತು ಮಾತುಗಾರಿಕೆ ಅನನ್ಯವಾದುದು’ ಎಂದು ಅವರು ಹೇಳಿದರು.

‘ಬ್ರಿಟನ್‌ನ ಪ್ರಧಾನಿ ಹುದ್ದೆಯಿಂದ ಇಳಿದ ನಂತರ ಡೇವಿಡ್ ಕ್ಯಾಮರೂನ್‌ ಅವರ ಜತೆ ಮಾತನಾಡಿದ್ದೆ. ನಿಮ್ಮ ಅಧಿಕಾರದ ಅವಧಿಯಲ್ಲಿ ನೀವು ಮಾಡಿದ ದೊಡ್ಡ ತಪ್ಪು ಯಾವುದು ಎಂದು ಅವರನ್ನು ಪ್ರಶ್ನಿಸಿದ್ದೆ. ಅವರು ಬ್ರೆಕ್ಸಿಟ್ ಅಥವಾ ಬೇರೆ ಯಾವುದಾದರೂ ವಿಚಾರವನ್ನು ಪ್ರಸ್ತಾಪಿಸಬಹುದು ಎಂದುಕೊಂಡಿದ್ದೆ. ಆದರೆ ಅವರು, ‘ಮೋದಿಯನ್ನು ವಿಂಬ್ಲೆ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದೇ ನಾನು ಮಾಡಿದ ತಪ್ಪು. ಅಲ್ಲಿ ಮೋದಿ ಅವರು ಮಾತು ಆರಂಭಿಸುತ್ತಿದ್ದಂತೆಯೇ ನನ್ನ ದೇಶದಲ್ಲಿ ನಾನೇ ಪರಕೀಯ ಅನ್ನಿಸತೊಡಗಿತು’ ಎಂದು ಕ್ಯಾಮರೂನ್‌ ಹೇಳಿದ್ದರು’ ಎಂದು ಜೇಟ್ಲಿ ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.