ADVERTISEMENT

ಒಗ್ಗಟ್ಟಿನ ಉತ್ತರವೇ ಮುಖ್ಯವಾಗಲಿ: ಮೋದಿ

ಕೋವಿಡ್‌–19 ನಂತರದ ದಿನಗಳು ಸವಾಲಿನವು, ಹೊಸ ಸಾಧ್ಯತೆಗಳೂ ಇವೆ

ಪಿಟಿಐ
Published 19 ಏಪ್ರಿಲ್ 2020, 22:07 IST
Last Updated 19 ಏಪ್ರಿಲ್ 2020, 22:07 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ‘ಕೋವಿಡ್‌–19 ಯಾರನ್ನಾದರೂ ಬಾಧಿಸಬಹುದು. ಈ ಮಹಾಮಾರಿ ಜಾತಿ, ಧರ್ಮ, ಜನಾಂಗ, ವರ್ಣ, ಭಾಷೆ ಅಥವಾ ಗಡಿಯನ್ನು ನೋಡಿ ಅಪ್ಪಳಿಸುವುದಿಲ್ಲ. ಎಲ್ಲ ಭೇದಗಳನ್ನು ಮರೆತು ಒಗ್ಗಟ್ಟಾಗಿ ಎದುರಿಸುವುದೇ ನಾವು ಈ ಪಿಡುಗಿಗೆ ನೀಡುವ ಉತ್ತರವಾಗಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತಂತೆ ಅವರುಸಾಮಾಜಿಕ ಮಾಧ್ಯಮ ಲಿಂಕ್ಡ್‌ಇನ್‌ನಲ್ಲಿ ಭಾನುವಾರ ಬರೆದಿದ್ದಾರೆ.

ಮುಸ್ಲಿಂ ರೋಗಿಗಳನ್ನು ಕೋವಿಡ್‌–19 ಪರೀಕ್ಷೆಗೆ ಒಳಪಡಿಸಿದ ನಂತರವಷ್ಟೇ ಒಳರೋಗಿಯಾಗಿ ದಾಖಲು ಮಾಡಿಕೊಳ್ಳುವುದಾಗಿ ಉತ್ತರ ಪ್ರದೇಶದ ಆಸ್ಪತ್ರೆಯೊಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತ್ತು. ಈ ಕಾರಣಕ್ಕಾಗಿ ಆಸ್ಪತ್ರೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಮರುದಿನವೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ಈ ರೀತಿ ಬರೆದಿದ್ದಕ್ಕೆ ಮಹತ್ವ ಬಂದಿದೆ.

‘ಈ ಹಿಂದೆ, ದೇಶ–ದೇಶಗಳ ನಡುವೆ, ಸಮಾಜಗಳ ನಡುವೆ ಸಂಘರ್ಷ ನಡೆಯುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಆದರೆ, ಈಗ ಎಲ್ಲ ದೇಶ– ಸಮಾಜಗಳಿಗೆ ಒಂದೇ ಸವಾಲು ಎದುರಾಗಿದೆ. ಭವಿಷ್ಯದಲ್ಲಿ ಮಾನವ ಕುಲವೇ ಒಂದಾಗಿ ನಿಲ್ಲುವ, ಪುಟಿದೇಳುವಂತಹ ದಿನಗಳಿರಲಿವೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಪ್ರಸ್ತುತ ಸಂದರ್ಭದಲ್ಲಿ ಜಗತ್ತೇ ಭಾರತದತ್ತ ನೋಡುತ್ತಿದೆ. ಇಲ್ಲಿ ಹೊರಹೊಮ್ಮುವ ಹೊಸ ವಿಚಾರ, ಯೋಚನೆಗಳು ಜಾಗತಿಕವಾಗಿ ಸ್ವೀಕೃತಗೊಳ್ಳುವ ಮತ್ತು ಅನ್ವಯವಾಗುವಂತಿರಬೇಕು. ಈ ವಿಚಾರಗಳು ಭಾರತದಲ್ಲಿ ಮಾತ್ರವಲ್ಲ ಇಡೀ ಮನುಕುಲದಲ್ಲಿಯೇ ಸಕಾರಾತ್ಮಕ ಬದಲಾವಣೆ ತರುವಂಥ ಸಾಮರ್ಥ್ಯ ಹೊಂದಿರಬೇಕು’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಈ ಮೊದಲು ರಸ್ತೆ, ಉಗ್ರಾಣಗಳು, ಬಂದರುಗಳು ಸೇರಿದಂತೆ ಭೌತಿಕ ಸೌಕರ್ಯಗಳ ಚೌಕಟ್ಟಿನ ಆಧಾರದಲ್ಲಿಯೇ ಸಾಗಾಣಿಕೆ–ಪೂರೈಕೆ ಕ್ಷೇತ್ರವನ್ನು ವ್ಯಾಖ್ಯಾನಿಸಲಾಗುತ್ತಿತ್ತು.ಕೊರೊನಾ ವೈರಸ್‌ ಸೋಂಕಿನ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಸಾಗಣೆ–ಪೂರೈಕೆ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಇದು ತಂತ್ರಜ್ಞಾನದ ಸಮರ್ಥ ಬಳಕೆಯಿಂದ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಸಾಗಾಣಿಕೆ– ಪೂರೈಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ ಭಾರತಕ್ಕಿದೆ. ಈಗ ಲಭಿಸಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ನಾವು ಸಿದ್ಧರಾಗಬೇಕು’ ಎಂದೂ ಪ್ರತಿಪಾದಿಸಿದ್ದಾರೆ.

‘ಈಗ ಡಿಜಿಟಲ್‌ ಫಸ್ಟ್‌‘ (ತಂತ್ರಜ್ಞಾನವೇ ಮೊದಲು) ಎಂಬಂತಾಗಿದ್ದು,ವೃತ್ತಿಗಳಿಗೆ ಇದ್ದ ಮಿತಿಗಳೇ ಅಳಿಸಿಹೋಗಿವೆ. ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ಮನೆಯೇ ಕಚೇರಿ ರೂಪ ಪಡೆದುಕೊಂಡಿದ್ದರೆ, ಇಂಟರ್‌ನೆಟ್‌ ಎಂಬುದೇ ಸಭೆ ನಡೆಸುವ ಕೊಠಡಿಯಂತಾಗಿದೆ. ಅಧಿಕಾರಶಾಹಿಯಲ್ಲಿ ಶ್ರೇಣಿಕೃತ ವ್ಯವಸ್ಥೆಯೇ ನಾಶವಾಗಿದೆ. ಮಧ್ಯವರ್ತಿಗಳ ಅವಶ್ಯಕತೆಯೇ ಮಾಯವಾಗಿದ್ದಲ್ಲದೇ ಅಭಿವೃದ್ಧಿಗೆ ವೇಗ ಬಂದಿದೆ ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.