ಜೈರಾಮ್ ರಮೇಶ್
–ಪಿಟಿಐ ಚಿತ್ರ
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ‘ಹೊಗಳಿಕೆ’ (ತಾರೀಫ್) ಪಡೆದುಕೊಳ್ಳುವುದರಲ್ಲಿ ಮಾತ್ರ ಆಸಕ್ತರಾಗಿದ್ದಾರೆ; ಸುಂಕ ಏರುತ್ತಿರುವ (ಟ್ಯಾರಿಫ್) ಕುರಿತು ಅವರಿಗೆ ಕಳವಳ ಇಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
‘ಅಮೆರಿಕದಿಂದ ಎದುರಾಗಿರುವ ಸುಂಕದ ಸಮಸ್ಯೆ ವಿಷಯದಲ್ಲಿ ಪ್ರಧಾನಿಯ 56 ಇಂಚಿನ ಎದೆಗಾರಿಕೆ ಎಲ್ಲಿಹೋಯಿತು’ ಎಂದು ಅವರು ಪ್ರಶ್ನಿಸಿದ್ದಾರೆ.
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸುತ್ತಿರುವ ಪ್ರತಿಸುಂಕದ ಕುರಿತು ಬಜೆಟ್ ಅಧಿವೇಶನದ ಎರಡನೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ಸದನದಲ್ಲಿ ಪ್ರಸ್ತಾಪಿಸಲಿದೆ. ಬೆದರಿಕೆ ಎದುರಿಸಲು ಸಾಮೂಹಿಕ ಸಂಕಲ್ಪ ತೆಗೆದುಕೊಳ್ಳಬೇಕು’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಭಾರತದ ವಿದೇಶಾಂಗ ಸಚಿವರಾಗಿರುವ ಎಸ್.ಜೈಶಂಕರ್ ಅವರು ಅಮೆರಿಕದ ರಾಯಭಾರಿಯಂತೆ, ಆ ದೇಶದ ವಕ್ತಾರರಂತೆ ಮಾತನಾಡುತ್ತಿದ್ದಾರೆ’ ಎಂದು ರಮೇಶ್ ಆರೋಪಿಸಿದರು.
‘ಆದಷ್ಟೂ ಸುಂಕ ಏರಿಕೆಯ ಬಗ್ಗೆ ಮಾತನಾಡಿ, ಹೊಗಳಿಕೆಗೆ ಪಾತ್ರವಾಗುವುದನ್ನು ಪ್ರಧಾನಿ ಸ್ವಲ್ಪ ಕಡಿಮೆ ಮಾಡಿಕೊಳ್ಳಲಿ’ ಎಂದು ಅವರು ಸಲಹೆ ನೀಡಿದ್ದಾರೆ.
‘1971ರ ನವೆಂಬರ್‌ನಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್‌ಗೆ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳಬೇಕು. ನಿಕ್ಸನ್ ಹಾಗೂ ಹೆನ್ರಿ ಕಿಸಿಂಜರ್ ಅವರು ದೇಶದ ಮಾನ ಕಳೆಯಲು ಮುಂದಾದ ವೇಳೆ ಇಂದಿರಾ ಗಾಂಧಿ ಗಟ್ಟಿಯಾಗಿ ನಿಂತಿದ್ದರು. ದೇಶದ ಹಿತಕ್ಕಾಗಿಯೇ ಕೆಲಸ ಮಾಡುವುದಾಗಿ ತಿಳಿಸಿದ್ದರು’ ಎಂದು ಜೈರಾಮ್ ರಮೇಶ್ ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.