ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರ 390ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗೌರವ ಸಲ್ಲಿಸಿದರು. ಶಿವಾಜಿ ಮಹಾರಾಜರ ಜೀವನವು ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತಿರುವ ಫೋಟೊವನ್ನು ಟ್ವಿಟರ್‌ನಲ್ಲಿಶೇರ್ ಮಾಡಿಕೊಂಡಿರುವ ಅವರು, ಶಿವಾಜಿ ಅವರುಧೈರ್ಯದ ಸಾಕಾರ ಮೂರ್ತಿ, ಸಹಾನುಭೂತಿ ಮತ್ತು ಉತ್ತಮ ಆಡಳಿತಗಾರ. ಭಾರತ ತಾಯಿಯ ಶ್ರೇಷ್ಠ ಪುತ್ರರಲ್ಲಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆಜನ್ಮವಾರ್ಷಿಕೋತ್ಸವದಂದು ನಮಿಸುತ್ತೇನೆ. ಅಸಾಧಾರಣವಾದ ಅವರ ಜೀವನವು ಲಕ್ಷಾಂತರ ಜನರನ್ನು ಪ್ರೇರೇಪಿಸುವುದನ್ನು ಮುಂದುವರಿಸಿದೆ ಎಂದು ಮೋದಿ ಬರೆದುಕೊಂಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಒಬ್ಬ ಪರಾಕ್ರಮಶಾಲಿ ಯೋಧ ಮತ್ತು ಅತ್ಯುತ್ತಮ ಆಡಳಿತಗಾರನಾಗಿ ಗುರುತಿಸಿಕೊಂಡವರು. ಬಲಿಷ್ಠವಾದ ನೌಕಾಪಡೆ ನಿರ್ಮಿಸುವುದರಿಂದ ಹಿಡಿದು ಹಲವಾರು ಜನಪರನೀತಿಗಳನ್ನು ಜಾರಿಗೆ ತರುವುದರಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯುತ್ತಮವಾಗಿದ್ದರು. ಅನ್ಯಾಯ ಮತ್ತು ಬೆದರಿಕೆಗಳನ್ನು ವಿರೋಧಿಸಿದ್ದಕ್ಕಾಗಿ ಅವರನ್ನು ಯಾವಾಗಲೂ ಸ್ಮರಿಸಲಾಗುವುದು ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಛತ್ರಪತಿ ಶಿವಾಜಿ ಅವರು ಫೆಬ್ರವರಿ 19, 1630ರಲ್ಲಿ ಪುಣೆಯ ಶಿವನೇರಿ ಕೋಟೆಯಲ್ಲಿ ಜನಿಸಿದರು.
ದೇಶದ ಜನರಿಗೆ ಶುಭಾಶಯ
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅದಮ್ಯ ಸಾಹಸ ಮತ್ತು ಪರಾಕ್ರಮದ ಪ್ರತೀಕವಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ದೇಶದ ಜನರಿಗೆ ಹಾರ್ದಿಕಶುಭಾಶಯಗಳು ಎಂದು ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.