ADVERTISEMENT

ಗೋಡ್ಸೆ ಭಕ್ತರನ್ನು ಹೊರಹಾಕಿ ಅಥವಾ ಗಾಂಧಿಗೆ ನಮಿಸುವುದು ನಿಲ್ಲಿಸಿ: ಮೋದಿಗೆ ‘ಕೈ’ ಸವಾಲು

ಪಿಟಿಐ
Published 11 ಜೂನ್ 2023, 2:33 IST
Last Updated 11 ಜೂನ್ 2023, 2:33 IST
ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ಅಂಗವಾಗಿ ಅಹಮದಾಬಾದ್‌ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಗಾಂಧಿ ಪ್ರತಿಮೆಗೆ ಶಿರಬಾಗಿ ನಮನ ಸಲ್ಲಿಸಿದ್ದರು.
ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ಅಂಗವಾಗಿ ಅಹಮದಾಬಾದ್‌ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಗಾಂಧಿ ಪ್ರತಿಮೆಗೆ ಶಿರಬಾಗಿ ನಮನ ಸಲ್ಲಿಸಿದ್ದರು.    ಪಿಟಿಐ

ನವದೆಹಲಿ: ನಾಥೂರಾಮ್ ಗೋಡ್ಸೆಯನ್ನು ಕೊಂಡಾಡುವ ಬಿಜೆಪಿ ನಾಯಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲೊಂದನ್ನು ಎಸೆದಿದೆ.

ಗೋಡ್ಸೆ ‘ಭಕ್ತರನ್ನು’ ಬಿಜೆಪಿಯಿಂದ ಹೊರದಬ್ಬಿ ಅಥವಾ ಗಾಂಧಿ ಪ್ರತಿಮೆಗಳಿಗೆ ಶಿರಬಾಗಿ ನಮಿಸುವ ಬೂಟಾಟಿಕೆಯನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಗೋಡ್ಸೆಯನ್ನು ಭಾರತದ ‘ಸಪೂತ್’ (ಸುಪುತ್ರ) ಎಂದು ಕರೆದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಧಾನಿಯನ್ನು ಟೀಕಿಸಿದೆ. ಮತ್ತೊಬ್ಬ ಬಿಜೆಪಿ ನಾಯಕ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕೆಲವು ದಿನಗಳ ಹಿಂದೆ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಬಣ್ಣಿಸಿದ್ದರು.

ADVERTISEMENT

ಬಿಜೆಪಿಯ ಹಿರಿಯ ನಾಯಕರು ಗೋಡ್ಸೆಯನ್ನು ವೈಭವೀಕರಿಸುತ್ತಿದ್ದರೂ ಪ್ರಧಾನಿ ಏನೂ ಮಾತನಾಡುತ್ತಿಲ್ಲ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಇಂದು ನಾವು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕುತ್ತೇವೆ: ಇವುಗಳಲ್ಲಿ ಯಾವುದಾದರೂ ಒಂದನ್ನು ನೀವು ಮಾಡಬೇಕು. ನಿಮ್ಮ ಪಕ್ಷದಿಂದ ಗೋಡ್ಸೆ ಭಕ್ತರನ್ನು ಹೊರಹಾಕಿ ಅಥವಾ ಗಾಂಧೀಜಿಯ ಮುಂದೆ ತಲೆಬಾಗಿ ನಮಿಸುವ ಬೂಟಾಟಿಕೆಯನ್ನು ಕೊನೆಗೊಳಿಸಿ. ಗಾಂಧೀಜಿಯ ಈ ದೇಶದಲ್ಲಿ ಗೋಡ್ಸೆಯ ಆರಾಧಕರಿಗೆ ಸ್ಥಾನವಿರಬಾರದು. ಮೋದಿ ಅವರೇ, ನೀವೇ ನಿರ್ಧರಿಸಬೇಕು’ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ.

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಜಪಾನ್‌ಗೆ ಭೇಟಿ ನೀಡಿದ್ದ ವೇಳೆ, ಮಹಾತ್ಮ ಗಾಂಧಿಯವರ ಪ್ರತಿಮೆ ಅನವಾರಣಗೊಳಿಸಿ, ಶಿರಬಾಗಿ ನಮಿಸುತ್ತಿರುವ ಚಿತ್ರವನ್ನೂ ಕಾಂಗ್ರೆಸ್‌ ತನ್ನ ಟ್ವೀಟ್‌ನೊಂದಿಗೆ ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.