ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವರು ನಗರ ನಕ್ಸಲರ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತದ ಮೇಲೆ ಯುದ್ಧ ಸಾರುವವರಿಗೆ ದೇಶದ ಸಂವಿಧಾನವೂ ಅರ್ಥವಾಗುವುದಿಲ್ಲ, ದೇಶದ ಏಕತೆಯೂ ಅರ್ಥವಾಗುವುದಿಲ್ಲ ಎಂದು ಪ್ರಧಾನಿ ಕಟುವಾಗಿ ಹೇಳಿದರು.
ಮೋದಿ ಅವರು ತಮ್ಮ ಮಾತಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ. ಆದರೆ, ರಾಹುಲ್ ಅವರು ಕಳೆದ ತಿಂಗಳು ‘ನಾವು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ’ ಎಂದು ಹೇಳಿದ್ದರು. ಹೀಗಾಗಿ, ಮೋದಿ ಅವರ ಮಾತುಗಳು ರಾಹುಲ್ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡಿದ್ದವು ಎಂದು ವಿಶ್ಲೇಷಿಸಲಾಗಿದೆ.
ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಿದ ಪ್ರಧಾನಿ, ರಾಹುಲ್ ಅವರನ್ನು ಗುರಿಯಾಗಿಸಿಕೊಂಡು ಹಲವು ಬಾರಿ ಪರೋಕ್ಷವಾಗಿ ಕುಟುಕಿದರು. ಬಡವರ ಗುಡಿಸಲುಗಳಲ್ಲಿ ಫೋಟೊ ತೆಗೆಸಿಕೊಂಡು ತಮ್ಮನ್ನು ರಂಜಿಸಿಕೊಳ್ಳುವವರಿಗೆ ಸಂಸತ್ತಿನಲ್ಲಿ ಬಡವರ ಕುರಿತು ಆಡಿದ ಮಾತುಗಳು ಬೋರುಹೊಡೆಸುತ್ತವೆ ಎಂದರು.
‘ಸಂವಿಧಾನದ ಪುಸ್ತಕವನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುವವರಿಗೆ ತಾವು ಮುಸ್ಲಿಂ ಮಹಿಳೆಯರನ್ನು ಹೇಗೆ ಕಷ್ಟಕ್ಕೆ ಸಿಲುಕಿಸಿದೆವು ಎಂಬುದು ಗೊತ್ತಿದೆಯೇ? ನಾವು ತ್ರಿವಳಿ ತಲಾಖ್ ಕಾನೂನು ತಂದು ಮುಸ್ಲಿಂ ಮಹಿಳೆಯರಿಗೆ ಹಕ್ಕುಗಳನ್ನು ನೀಡಿದೆವು’ ಎಂದು ಮೋದಿ ಹೇಳಿದರು.
ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಪರೋಕ್ಷವಾಗಿ ಟೀಕಿಸಿದ ಪ್ರಧಾನಿ, ‘ಕೆಲವು ಪಕ್ಷಗಳು ಆಪ್‌ದಾ (ವಿಪತ್ತು) ಇದ್ದಂತೆ’ ಎಂದರು. ‘ಸರ್ಕಾರದ ಕೆಲವು ಯೋಜನೆಗಳು ಭಾರಿ ಪ್ರಮಾಣದಲ್ಲಿ ಹಣ ಉಳಿಸಿದವು. ಆದರೆ ನಾವು ಆ ಹಣವನ್ನು ಶೀಷಮಹಲ್ ಕಟ್ಟಿಸಲು ಬಳಸಲಿಲ್ಲ’ ಎಂದು ಹೇಳಿದರು.
‘ನಾವು ಸುಳ್ಳು ಘೋಷಣೆಗಳನ್ನು ಮಾಡಲಿಲ್ಲ. ನಿಜವಾದ ಅಭಿವೃದ್ಧಿಯನ್ನು ಜನರಿಗೆ ನೀಡಿದೆವು’ ಎಂದರು.
ಬಜೆಟ್ ಘೋಷಣೆಗಳನ್ನು ಶ್ಲಾಘಿಸಿದ ಮೋದಿ ಅವರು, 2002ರಲ್ಲಿ ₹2 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರಲಿಲ್ಲ, ಈಗ ₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ ಎಂದರು.
* ನಮ್ಮ ಸರ್ಕಾರವು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಹತ್ತು ವರ್ಷಗಳಲ್ಲಿ 58 ಸಾವಿರ ಎಂಬಿಬಿಎಸ್ ಸೀಟುಗಳನ್ನು ನೀಡಿದೆ. ಈ ಸಮುದಾಯಗಳಿಗೆ 2014ಕ್ಕೂ ಮೊದಲು 25,500 ಸೀಟುಗಳು ಇದ್ದವು.
* ಎಸ್‌ಸಿ ಸಮುದಾಯಗಳ ವಿದ್ಯಾರ್ಥಿಗಳಿಗೆ 2014ಕ್ಕೂ ಮೊದಲು 7,700 ಸೀಟುಗಳು ಸಿಗುತ್ತಿದ್ದವು. ಈಗ ಆ ಸಂಖ್ಯೆ 17 ಸಾವಿರವಾಗಿದೆ. ಎಸ್‌ಟಿ ಸಮುದಾಯಗಳಿಗೆ 3,800 ಸೀಟುಗಳು ಸಿಗುತ್ತಿದ್ದವು, ಈಗ ಅವುಗಳ ಸಂಖ್ಯೆ 9 ಸಾವಿರ.
* ಒಬಿಸಿ ಸಮುದಾಯಗಳಿಗೆ ಸಿಗುತ್ತಿದ್ದ 14 ಸಾವಿರ ಸೀಟುಗಳ ಸಂಖ್ಯೆಯು ಈಗ 32 ಸಾವಿರಕ್ಕೆ ಹೆಚ್ಚಿದೆ.
* ಮೀಸಲಾತಿಯ ಸೌಲಭ್ಯ ಇರುವ ಈ ಮೂರು ವರ್ಗಗಳಿಗೆ ಸಿಗುವ ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿ ಶೇಕಡ 127ರಷ್ಟು ಹೆಚ್ಚಳ ಆಗಿದೆ.
* ನಮ್ಮ ಸರ್ಕಾರವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಜನರಿಗೆ ಅತಿಹೆಚ್ಚಿನ ಪ್ರಮಾಣದಲ್ಲಿ ಅವಕಾಶಗಳನ್ನು ಕೊಡಿಸಲು ಕೆಲಸ ಮಾಡಿದೆ. ಸಮಾಜದಲ್ಲಿ ಬಿಕ್ಕಟ್ಟು ಸೃಷ್ಟಿಸದೆಯೇ ಈ ಕೆಲಸ ಮಾಡಲಾಗಿದೆ. (ದೇಶದಲ್ಲಿ ಜಾತಿ ಗಣತಿ ನಡೆಸಬೇಕು ಎಂಬ ಆಗ್ರಹ ಇರುವ ಸಂದರ್ಭದಲ್ಲಿ ಪ್ರಧಾನಿಯವರು ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ)
ನಾವು ಸಂವಿಧಾನದ ಆಶಯಕ್ಕೆ ತಕ್ಕಂತೆ ಬದುಕುತ್ತೇವೆ ವಿಷಕಾರಿ ರಾಜಕಾರಣದಲ್ಲಿ ತೊಡಗುವುದಿಲ್ಲ. –ನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.