ADVERTISEMENT

ಕಾಂಗ್ರೆಸ್‍ಗೆ ಸೇರಲಿದ್ದಾರೆ ಪ್ರಧಾನಿ ಮೋದಿಯನ್ನು ಹೋಲುವ ವ್ಯಕ್ತಿ !

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 10:21 IST
Last Updated 5 ಅಕ್ಟೋಬರ್ 2018, 10:21 IST
   

ನವದೆಹಲಿ: ಬಿಜೆಪಿ ಪ್ರಚಾರ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ವ್ಯಕ್ತಿಯೊಬ್ಬರು ಜನರ ಗಮನ ಸೆಳೆದಿದ್ದರು.ಮೋದಿಯವರ ಅಭಿಮಾನಿ, ಬೆಂಬಲಿಗರೂ ಆಗಿದ್ದ ಅಭಿನಂದನ್ ಪಾಠಕ್ ಎಂಬ ವ್ಯಕ್ತಿ 'ಮೋದಿ' ಎಂದೇ ಕರೆಯಲ್ಪಡುತ್ತಿದ್ದರು.

ಶಹಾನ್‍ಪುರ್ ನಿವಾಸಿಯಾದ ಪಾಠಕ್ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರಲು ತೀರ್ಮಾನಿಸಿದ್ದಾರೆ.ಬಿಜೆಪಿಯ ಆಡಳಿತತೃಪ್ತಿ ನೀಡಲಿಲ್ಲ ಎಂಬ ಕಾರಣದಿಂದ ಪಾಠಕ್ ಕಾಂಗ್ರೆಸ್‍ಗೆ ಸೇರಲು ತೀರ್ಮಾನಿಸಿದ್ದಾರೆ.

ನರೇಂದ್ರ ಮೋದಿಯವರು ಹೇಳಿದ ಕೆಲಸ ಕಾರ್ಯಗಳನ್ನು ಬಿಜೆಪಿ ಮಾಡುತ್ತಿಲ್ಲ.ಅಚ್ಛೇ ದಿನ್ ಯಾವಾಗ ಬರುತ್ತದೆ ಎಂದು ಜನರು ಕೇಳುತ್ತಲೇ ಇದ್ದಾರೆ ಎಂದು ಪಾಠಕ್ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಬುಧವಾರ 'ಮೋದಿ'ಯನ್ನು ಹೋಲುವ ಈ ವ್ಯಕ್ತಿ ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ ಕಚೇರಿಗೆ ಬಂದಾಗ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಅಚ್ಚರಿಯಾಗಿದೆ.ಅದು ಮೋದಿಯಲ್ಲ ಮೋದಿಯನ್ನು ಹೋಲುವ ವ್ಯಕ್ತಿ ಎಂದು ತಿಳಿದಾಗ ನಮ್ಮ ಬ್ಯಾಂಕ್ ಖಾತೆಗೆ ₹15 ಲಕ್ಷ ಯಾವಾಗ ಸಿಗುತ್ತದೆ ಎಂದು ಅವರು ತಮಾಷೆ ಮಾಡಿದ್ದಾರೆ.

ತಾನು ಮೋದಿಯಂತೆ ಕಾಣುತ್ತಿರುವುದರಿಂದ ಜನರು ನನ್ನನ್ನು ಈ ರೀತಿ ತಮಾಷೆ ಮಾಡುತ್ತಿರುತ್ತಾರೆ. ಕೇಂದ್ರ ಸರ್ಕಾರದ ಆಡಳಿತದಿಂದ ರೋಸಿ ಹೋದ ಜನರು ತನ್ನ ಮೇಲೆ ಹಲ್ಲೆ ನಡೆಸಿದ್ದೂ ಇದೆ ಎಂದು ಪಾಠಕ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಿಜೆಪಿಯ ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಪಾಠಕ್, ಮೋದಿಯವರ ರ‍್ಯಾಲಿಯಲ್ಲಿಯೂ ಕಾಣಿಸಿಕೊಂಡಿದ್ದರು. ಮೋದಿಯ ಮೇಲೆ ಅಭಿಮಾನವಿದ್ದರೂ, ಅವರು ನೀಡಿದ ಭರವಸೆಯನ್ನು ಪೂರೈಸದೇ ಇರುವ ಕಾರಣ ಮೋದಿ ವಿರುದ್ಧ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ರಾಹುಲ್ ಗಾಂಧಿಯವರ ಜತೆ ಮಾತುಕತೆ ನಡೆಸಲು ನನಗೆ ಅವಕಾಶ ಮಾಡಿಕೊಡಬೇಕು ಎಂದು ಯುಪಿಸಿಸಿ ಮುಖ್ಯಸ್ಥರಿಗೆ ಮನವಿ ಮಾಡಿರುವುದಾಗಿ ಪಾಠಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.