ADVERTISEMENT

ನಿವೃತ್ತ ಸಿಜೆಐ ಎ.ಎಂ.ಅಹ್ಮದಿ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2023, 14:32 IST
Last Updated 3 ಮಾರ್ಚ್ 2023, 14:32 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎ.ಎಂ.ಅಹ್ಮದಿ (90) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎ.ಎಂ.ಅಹ್ಮದಿ ಅವರು ಗುರುವಾರ ರಾತ್ರಿ ನಿಧನರಾದರು. ಅವರನ್ನು ದಕ್ಷಿಣ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಎ.ಎಂ.ಅಹ್ಮದಿ ಜಿ ಅವರ ನಿಧನದಿಂದ ನೋವಾಗಿದೆ. ಅವರು ವಕೀಲರಾಗಿ ಮತ್ತು ನ್ಯಾಯಾಧೀಶರಾಗಿ ವಿಶಿಷ್ಟವಾದ ವೃತ್ತಿಜೀವನವನ್ನು ಹೊಂದಿದ್ದರು. ಅವರು ನಮ್ಮ ನ್ಯಾಯಾಂಗವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಗಮನಾರ್ಹ ಕೊಡುಗೆ ನೀಡಿದ್ದಾರೆ. ಅಹ್ಮದಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಎ.ಎಂ.ಅಹ್ಮದಿ ಅವರು 1932 ಮಾರ್ಚ್ 25ರಂದು ಸೂರತ್‌ನಲ್ಲಿ ಜನಿಸಿದ್ದರು. 1964ರಲ್ಲಿ ಅಹಮದಾಬಾದ್‌ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ನ ನ್ಯಾಯಾಧೀಶರಾಗಿ, 1976ರಲ್ಲಿ ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

1988ರಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದರು. 1994ರ ಅಕ್ಟೋಬರ್‌ 25ರಂದು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು, 1997ರ ಮಾರ್ಚ್‌ 24ರಂದು ನಿವೃತ್ತರಾಗಿದ್ದರು. ಸುಪ್ರೀಂಕೋರ್ಟ್‌ ಕಾನೂನು ನೆರವು ಸಮಿತಿ ಅಧ್ಯಕ್ಷರಾಗಿ, ಎರಡು ಅವಧಿಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.