ADVERTISEMENT

ಪ್ರಧಾನಿ ಮೋದಿ, ಸಂಪುಟ ಸಚಿವರ ದೇಶ–ವಿದೇಶ ಪ್ರವಾಸಕ್ಕೆ ₹393 ಕೋಟಿ ಖರ್ಚು

ಕಳೆದ ವರ್ಷ ರಾಜ್ಯ ಸಭೆಯಲ್ಲಿ ನೀಡಿದ್ದ ಮಾಹಿತಿಗೂ ಈ ಲೆಕ್ಕಕ್ಕೂ ಭಾರಿ ವ್ಯತ್ಯಾಸ

ಪಿಟಿಐ
Published 12 ಮೇ 2019, 1:48 IST
Last Updated 12 ಮೇ 2019, 1:48 IST
   

ಮುಂಬೈ:ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರ ದೇಶ–ವಿದೇಶ ಪ್ರವಾಸಗಳಿಗೆ ಕಳೆದ ಐದು ವರ್ಷಗಳಲ್ಲಿ ₹393.58 ಕೋಟಿ ಖರ್ಚಾಗಿದೆ.

ಮುಂಬೈನ ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲಗಲಿ ಅವರು ಮಾಹಿತಿ ಹಕ್ಕು ಕಾಯ್ದೆ ಅನ್ವಯ (ಆರ್‌ಟಿಐ) ಸಲ್ಲಿಸಿರುವ ಅರ್ಜಿಗೆ ಸಂಪುಟ ವ್ಯವಹಾರಗಳ ಖರ್ಚು–ವೆಚ್ಚ ನಿರ್ವಹಣೆ ವಿಭಾಗದ ಹಿರಿಯ ಅಧಿಕಾರಿ ಸತೀಶ್ ಗೋಯಲ್ ಈ ಮಾಹಿತಿ ನೀಡಿದ್ದಾರೆ.

ವಿಶೇಷವೆಂದರೆ, 2018ರ ಡಿಸೆಂಬರ್‌ನಲ್ಲಿ ರಾಜ್ಯ ಸಭೆಗೆ ಮಾಹಿತಿ ನೀಡಿದ್ದ ಸರ್ಕಾರ, 2014 -2018ರ ಅವಧಿಯಲ್ಲಿ ವಿದೇಶ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ₹2.021 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಹೇಳಿತ್ತು.

ADVERTISEMENT

ಇದೀಗ, 2014ರ ಮೇ ನಂತರ ಪ್ರಧಾನಿ ಮತ್ತು ಸಂಪುಟ ಸಹೋದ್ಯೋಗಿಗಳು ವಿದೇಶ ಪ್ರವಾಸಗಳಿಗೆ ₹263 ಕೋಟಿ ಖರ್ಚು ಮಾಡಿದ್ದು, ದೇಶದೊಳಗಿನ ಪ್ರವಾಸಗಳಿಗೆ ₹48 ಕೋಟಿ ಖರ್ಚು ಮಾಡಿದ್ದಾರೆ. ರಾಜ್ಯ ಖಾತೆ ಸಚಿವರು ವಿದೇಶ ಪ್ರವಾಸಕ್ಕೆ ₹29 ಕೋಟಿ ಹಾಗೂ ದೇಶದೊಳಗಿನ ಪ್ರವಾಸಕ್ಕೆ ₹53 ಕೋಟಿ ಖರ್ಚು ಮಾಡಿದ್ದಾರೆ. ಪ್ರಧಾನಿ ಹಾಗೂ ಸಚಿವರ ದೇಶ–ವಿದೇಶ ಪ್ರವಾಸಗಳ ಒಟ್ಟು ಖರ್ಚು ₹393.58 ಕೋಟಿ ಆಗಿದೆ ಎಂದುಗೋಯಲ್ ತಿಳಿಸಿದ್ದಾರೆ. 2014–15ರಲ್ಲಿ ಮೋದಿ ಹಾಗೂ ಸಚಿವರು ವಿದೇಶ ಪ್ರಯಾಣಕ್ಕೆ ₹88 ಕೋಟಿ ವ್ಯಯಿಸಿದ್ದಾರೆ.

ಪ್ರಧಾನಿ ಮತ್ತು ಸಚಿವರ ದೇಶ–ವಿದೇಶ ಭೇಟಿಯ ಖರ್ಚಿನ ವಿವರ ಸುಲಭವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಆದರೆ, ಈ ವಿಚಾರದಲ್ಲಿ ಸರ್ಕಾರ ಪಾರದರ್ಶಕತೆ ಅನುಸರಿಸಿಲ್ಲ ಎಂದುಗಲಗಲಿ ಆರೋಪಿಸಿದ್ದಾರೆ.

2014ರಿಂದ 2019ರ ಫೆಬ್ರುವರಿ 22ರವರೆಗೆ ಮೋದಿ ಅವರು 49 ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ, ವಿಮಾನಗಳ ಖರ್ಚನ್ನೂ ಪಟ್ಟಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.