ADVERTISEMENT

ಕುಶಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಪಿಟಿಐ
Published 20 ಅಕ್ಟೋಬರ್ 2021, 6:44 IST
Last Updated 20 ಅಕ್ಟೋಬರ್ 2021, 6:44 IST
ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಬುದ್ಧನ ವಿಗ್ರಹ ನೀಡಿ ಸನ್ಮಾನಿಸಿದರು.
ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಬುದ್ಧನ ವಿಗ್ರಹ ನೀಡಿ ಸನ್ಮಾನಿಸಿದರು.   

ಕುಶಿನಗರ (ಉತ್ತರ ಪ್ರದೇಶ): ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನುಪ್ರಧಾನಿ ನರೇಂದ್ರ ಮೋದಿಅವರು ಬುಧವಾರ ಉದ್ಘಾಟಿಸಿದರು.

ಉತ್ತರ ಪ್ರದೇಶ ರಾಜ್ಯದಲ್ಲಿರುವ ಕುಶಿನಗರ, ಭಗವಾನ್ ಗೌತಮ ಬುದ್ಧ ತೀರಿಕೊಂಡ ತಾಣ. ಇದನ್ನು ಬುದ್ಧ ಮಹಾಪರಿನಿರ್ವಾಣಗೊಂಡ ಸ್ಥಳ ಎಂದು ಕರೆಯುತ್ತಾರೆ. ಜಗತ್ತಿನಲ್ಲಿರುವ ಬೌದ್ಧ ತಾಣಗಳಲ್ಲಿ ಇದು ಬಹಳ ಪ್ರಮುಖವಾದ ತಾಣ.

ಜಗತ್ತಿನ ಬೇರೆ ಬೇರೆ ಭಾಗದಲ್ಲಿರುವ ಬೌದ್ಧ ಕ್ಷೇತ್ರಗಳನ್ನು ತಲಪಲು ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿರುವ ಬೌದ್ಧರ ಅನುಯಾಯಿಗಳಿಗೆ ಬುದ್ಧನ ಪರಿನಿರ್ವಾಣ ಸ್ಥಳಕ್ಕೆ ಸುಲಭವಾಗಿ ತಲುಪಲು ಈ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

3600 ಚದರ ಮೀಟರ್ ವಿಸ್ತೀರ್ಣದಲ್ಲಿರುವ ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ₹260 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಸಹಯೋಗದಲ್ಲಿ ನಿರ್ಮಾಣವಾಗಿದೆ.

ಈ ವಿಮಾನ ನಿಲ್ದಾಣ ದೇಶ ಮತ್ತು ವಿದೇಶಗಳಲ್ಲಿರುವ ಬೌದ್ಧ ಧರ್ಮದ ಅನುಯಾಯಿಗಳನ್ನು ಆಕರ್ಷಿಸಲು ನೆರವಾಗುತ್ತದೆ. ಬೌದ್ಧ ಧರ್ಮೀಯ ಆಧಾರಿತ ಸರ್ಕ್ಯೂಟ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ.

ಈ ವಿಮಾನ ನಿಲ್ದಾಣದ ಮೂಲಕ ಕಡಿಮೆ ಸಮಯದಲ್ಲಿ ದೇಶದಲ್ಲಿರುವ ಬೌದ್ಧ ಕ್ಷೇತ್ರಗಳಾದ ಲುಂಬಿನಿ, ಬೋಧಗಯಾ, ಸಾರಾನಾಥ, ಕುಶಿನಗರ, ಶ್ರಾವಸ್ತಿ, ರಾಜಗೀರ್, ಸಂಕಿಸಾ ಮತ್ತು ವೈಶಾಲಿ ಸ್ಥಳಗಳಿಗೆ ಪ್ರಯಾಣಿಸುವಂತಹ ಯೋಜನೆಯನ್ನು ಸಿದ್ಧಪಡಿಸಲಾಗುವುದು‘ ಎಂದು ಸೋಮವಾರ ಬಿಡುಗಡೆ ಮಾಡಿರುವ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.