ADVERTISEMENT

9 ಕೋಟಿ ರೈತರಿಗೆ ₹18,000 ಕೋಟಿ ಪರಿಹಾರ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಮೋದಿ ಭಾಷಣದ ಮುಖ್ಯಾಂಶಗಳು

ಏಜೆನ್ಸೀಸ್
Published 25 ಡಿಸೆಂಬರ್ 2020, 10:17 IST
Last Updated 25 ಡಿಸೆಂಬರ್ 2020, 10:17 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ– ಕಿಸಾನ್‌) ಯೋಜನೆ ಅಡಿಯಲ್ಲಿ 9 ಕೋಟಿ‌ಗೂ ಹೆಚ್ಚು ರೈತರಿಗೆ ₹18,000 ಕೋಟಿ ಪರಿಹಾರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ಪ್ರಧಾನಿ ಮೋದಿ ರೈತರೊಂದಿಗೆ ಸಂವಾದ ನಡೆಸಿದರು.

ಪಿಎಂ-ಕಿಸಾನ್‌ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ವಾರ್ಷಿಕ ₹6000 ಪರಿಹಾರವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ ₹2000 ರಂತೆ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂದರು.

ADVERTISEMENT

ಮೂರು ಕೃಷಿ ಕಾನೂನುಗಳು ರೈತರ ಪರವಾಗಿವೆ. ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ವ್ಯವಸ್ಥೆಯನ್ನು ಕಿತ್ತು ಹಾಕಲು ಅಥವಾ ಕೃಷಿ ಭೂಮಿಯನ್ನು ಕಸಿಯಲು ಯೂರಿಂದಲ್ಲೂ ಸಾಧ್ಯವಿಲ್ಲ ಎಂದರು.

ಕೆಲವರು ಭ್ರಮೆಯಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬುತ್ತಿದ್ದಾರೆ. ಎಂಎಸ್‌ಪಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ರೈತರನ್ನು ಹಾದಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.

ರೈತ ಸಂಘಟನೆಗಳೊಂದಿಗೆ ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ರೈತರು ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ ಹೇಳಿದ್ದೇನು...

* ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸುತ್ತಿದೆ. ಇದರ ಮಹತ್ವವನ್ನು ಮೋದಿ ವಿವರಿಸಿದರು.

* ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೃಷಿಪರ ಧೋರಣೆಗಳನ್ನು ಕೈಗೊಂಡಿದ್ದರು. ಸಣ್ಣ ಪುಟ್ಟ ರೈತರಿಗೂ ನೆರವಾಗಲು ಸರ್ಕಾರ ಬದ್ಧವಾಗಿದೆ.

*ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಕೆಲವರು ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ –ಮೋದಿ ಟೀಕೆ

* ಪಿಎಂ–ಕಿಸಾನ್‌ ಯೋಜನೆಯಡಿ 9 ಕೋಟಿಗೂ ಹೆಚ್ಚು ರೈತರಿಗೆ ಖಾತೆಗೆ ನೇರವಾಗಿ ₹18,000 ಕೋಟಿ ಜಮೆಯಾಗಿದೆ. ಇದುವೇ ಉತ್ತಮ ಆಡಳಿತ.

* ಪಶ್ಚಿಮ ಬಂಗಾಳದ ನನ್ನ ರೈತ ಮಿತ್ರರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ. ಅಲ್ಲಿನ ಬಂಗಾಳ ಸರಕಾರ ರಾಜಕೀಯ ಉದ್ದೇಶದಿಂದಾಗಿ ರೈತರಿಗೆ ಪ್ರಯೋಜನ ತಲುಪುತ್ತಿಲ್ಲ. ಇದು ಬೇಸರದ ಸಂಗತಿ.

* ಪಶ್ಚಿಮ ಬಂಗಾಳ ಸರ್ಕಾರ ರಾಜಕೀಯ ವೈರತ್ವದಿಂದಾಗಿ ಅಲ್ಲಿನ 70 ಲಕ್ಷ ರೈತರಿಗೆ ಯೋಜನೆಯ ಪ್ರಯೋಜನ ತಲುಪುತ್ತಿಲ್ಲ: ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ

* ಮಮತಾ ಬ್ಯಾನರ್ಜಿ ರಾಜಕೀಯ ನೀತಿಯು ಬಂಗಾಳವನ್ನು ನಾಶಪಡಿಸಿದೆ. ರೈತರ ವಿರುದ್ಧ ಆಕೆ ಮಾಡಿದ ಕ್ರಮಗಳು ನನಗೆ ತುಂಬಾ ನೋವನ್ನುಂಟು ಮಾಡಿದೆ. ವಿರೋಧ ಪಕ್ಷಗಳು ಈ ಬಗ್ಗೆ ಶಾಂತವಾಗಿದೆ ಏಕೆ?

* ಹಿಂದಿನ ಸರ್ಕಾರಗಳು ರೈತರ ಹಿತಕ್ಕಾಗಿ ಯಾವುದೇ ಯೋಜನೆಗಳನ್ನು ಮಾಡಿಲ್ಲ. ಈಗ ಹೆಡ್‌ಲೈನ್‌ಗಾಗಿ ನಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

* 21ನೇ ಶತಮಾನದಲ್ಲಿ ಕೃಷಿಯನ್ನು ಆಧುನೀಕರಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ರೈತರು ದೃಢ ಸಂಕಲ್ಪ ಕೈಗೊಳ್ಳಬೇಕು.

* ಇಂದು, ಪ್ರತಿಯೊಬ್ಬ ರೈತನು ತನ್ನ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿದೆ ಎಂಬುದನ್ನು ತಿಳಿದುಕೊಂಡಿದ್ದಾನೆ. ಈ ಕೃಷಿ ಸುಧಾರಣೆಗಳೊಂದಿಗೆ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ರೈತರಿಗೆ ಅನುಕೂಲಕರವಾಗುತ್ತಿದ್ದರೆ ತಪ್ಪೇನಿದೆ?

*ರೈತರು ಭೂಮಿಯನ್ನು ಕಳೆದುಕೊಳ್ಳುತ್ತಾರೆ ಎಂದು ಕೆಲವು ರಾಜಕಾರಣಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ದಾಖಲಾತಿ ಸಮಸ್ಯೆಯಿಂದ ರೈತರು ಭೂಮಿ ಕಳೆದುಕೊಂಡಾಗ ಅವರು ಎಲ್ಲಿದ್ದರು?

* ರೈತರ ಬಗ್ಗೆ ನಮಗೆ ಬದ್ಧತೆ ಇರುವುದರಿಂದ ನಾವು ಎಲ್ಲ ವಿಷಯಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಸಿದ್ಧರಿದ್ದೇವೆ.

* ನಮ್ಮ ಸರ್ಕಾರ ನಮ್ಮನ್ನು ವಿರೋಧಿಸುವವರೊಂದಿಗೆ ಮಾತನಾಡಲು ಸಿದ್ಧವಿದೆ. 'ಆತ್ಮ ನಿರ್ಭರ' ಕೃಷಿಕ ಮಾತ್ರ 'ಆತ್ಮ ನಿರ್ಭರ ಭಾರತ'ಕ್ಕೆ ಅಡಿಪಾಯ ಹಾಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.