ADVERTISEMENT

'ಪಿಎಂಒ ರಫೇಲ್‌ ಒಪ್ಪಂದದ ಮೇಲ್ವಿಚಾರಣೆ ನಡೆಸಿದೆ; ಅದು ಹಸ್ತಕ್ಷೇಪವಲ್ಲ’

ಸುಪ್ರೀಂಗೆ ಕೇಂದ್ರದ ಮಾಹಿತಿ

ಏಜೆನ್ಸೀಸ್
Published 4 ಮೇ 2019, 20:15 IST
Last Updated 4 ಮೇ 2019, 20:15 IST
   

ನವದೆಹಲಿ: ‘ರಫೇಲ್‌ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ಪ್ರಗತಿಯನ್ನು ಪ್ರಧಾನಿ ಕಚೇರಿ ಮೇಲ್ವಿಚಾರಣೆ ವಹಿಸಿದ್ದನ್ನು ಪರ್ಯಾಯ ಸಂಧಾನ ಎಂದು ಪರಿಗಣಿಸಬಾರದು’ ಎಂದು ಕೇಂದ್ರ ಸರ್ಕಾರ ಶನಿವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಪ್ರಧಾನಿ ಮೋದಿ, ಫ್ರಾನ್ಸ್‌ನಿಂದ 126 ಯುದ್ಧ ವಿಮಾನಗಳ ಬದಲಿಗೆ 36 ಯುದ್ಧ ವಿಮಾನಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿ ಉದ್ಯಮಿ ಅನಿಲ್‌ ಅಂಬಾನಿ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳಿಗೆ ಕೇಂದ್ರ ಈ ಪ್ರತಿಕ್ರಿಯೆ ನೀಡಿದೆ.

ಸುಪ್ರೀಂ ಕೋರ್ಟ್‌ 2018ರ ಡಿ.14ರಂದು ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿ ಕೇಂದ್ರದ ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್‌ ಶೌರಿ ಹಾಗೂ ವಕೀಲ ಪ್ರಶಾಂತ್‌ ಭೂಷಣ್ ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಸ್ವಾಧೀನ ವ್ಯವಸ್ಥಾಪಕ (ವಾಯುಪಡೆ) ಈ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ.

‘ಯುದ್ಧವಿಮಾನಗಳ ಬೆಲೆಯ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಿಎಜಿಗೂ ಮಾಹಿತಿ ನೀಡಲಾಗಿದೆ. ನಿಗದಿಗಿಂತ ಶೇ 2.86ರಷ್ಟು ಕಡಿಮೆ ಬೆಲೆಗೆ 36 ಯುದ್ಧವಿಮಾನಖರೀದಿಸಲಾಗಿದೆ’ ಎಂದೂ ಸರ್ಕಾರ ತಿಳಿಸಿದೆ. ಒಪ್ಪಂದದ ಪಾಲುದಾರರಾಗಿ ಅನಿಲ್‌ ಅಂಬಾನಿ ಕಂಪನಿ ಆಯ್ಕೆಯಾಗಿರುವುದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ, ಕೇಂದ್ರ ಹೇಳಿದೆ.

‘ವಿಚಾರಣೆ ಅಗತ್ಯವಿಲ್ಲ’
‘ಮರುಪರಿಶೀಲನಾ ಅರ್ಜಿಯ ವ್ಯಾಪ್ತಿ ತೀರಾ ಸೀಮಿತವಾದುದಾಗಿದೆ’ ಎಂದು ಕೇಂದ್ರ ಪ್ರತಿಪಾದಿಸಿದೆ. ಅಲ್ಲದೆ, ಕೆಲವು ಮಾಧ್ಯಮಗಳ ವರದಿ ಆಧರಿಸಿ ಮತ್ತು ರಕ್ಷಣಾ ಸಚಿವಾಲಯದ ಅಪೂರ್ಣ ಆಂತರಿಕ ಟಿಪ್ಪಣಿ ಆಧಾರದ ಮೇಲೆ ರಫೇಲ್‌ ಖರೀದಿ ಒಪ್ಪಂದದ ಕುರಿತು ಮರುಪರಿಶೀಲನೆ ಅಗತ್ಯವೂ ಇಲ್ಲ ಎಂದು ಸರ್ಕಾರ ಹೇಳಿದೆ.

‘ಅಂಬಾನಿ ಪಾಲುದಾರಿಕೆಯಲ್ಲೂ ಸರ್ಕಾರದ ಪಾತ್ರವಿಲ್ಲ’
ಒಪ್ಪಂದದ ಪಾಲುದಾರರಾಗಿ ಅನಿಲ್‌ ಅಂಬಾನಿ ಕಂಪನಿ ಆಯ್ಕೆಯಾಗಿರುವುದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

‘ಕೆಲವು ಮಾಧ್ಯಮಗಳು ಈ ಕುರಿತು ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ಈ ರೀತಿ ಸುದ್ದಿ ಮಾಡಿವೆ’ ಎಂದೂ ಸರ್ಕಾರ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.