ADVERTISEMENT

ಪಿಎನ್‌ಬಿ ಹಗರಣ: ನೀರವ್‌ಮೋದಿಗೆ ಸೇರಿದ ₹255 ಕೋಟಿ ಆಸ್ತಿ ಮುಟ್ಟುಗೋಲು

ಹಾಂಗ್‌ಕಾಂಗ್‌ನಲ್ಲಿದ್ದ ಆಸ್ತಿ ವಶಕ್ಕೆ ಪಡೆದ ಇ.ಡಿ

ಪಿಟಿಐ
Published 25 ಅಕ್ಟೋಬರ್ 2018, 19:30 IST
Last Updated 25 ಅಕ್ಟೋಬರ್ 2018, 19:30 IST
ನೀರವ್‌ ಮೋದಿ 
ನೀರವ್‌ ಮೋದಿ    

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ನೀರವ್‌ ಮೋದಿಗೆ ಸೇರಿದ ₹255 ಕೋಟಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಮುಟ್ಟುಗೋಲು ಹಾಕಿಕೊಂಡಿದೆ.

ಅಕ್ರಮ ಹಣ ಸಾಗಾಣೆ ತಡೆ ಕಾಯ್ದೆ (ಪಿಎಂಎಲ್‌ಎ) ಕಾಯ್ದೆ ಅಡಿಯಲ್ಲಿ ಹಾಂಕಾಂಗ್‌ನಲ್ಲಿದ್ದ ನೀರವ್‌ಗೆ ಸೇರಿದ ಆಸ್ತಿ ಹಾಗೂ ಆಭರಣವನ್ನು ವಶಕ್ಕೆ ಪಡೆಯಲಾಗಿದೆ.

‘ನೀರವ್‌ಮೋದಿ ವಿರುದ್ಧ ಭಾರತದಲ್ಲಿ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಾದ ಬಳಿಕದುಬೈನ ತನ್ನ ಕಂಪನಿಯಿಂದ ಹಾಂಕಾಂಗ್‌ನಲ್ಲಿದ್ದ ತನ್ನದೇ ಕಂಪನಿಗಳಿಗೆ 26 ಹಡಗಿನ ಮೂಲಕ ರಫ್ತು ಮಾಡಿದ್ದರು. ಇದರಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳು ಸೇರಿವೆ’ ಎಂದು ಇ.ಡಿ ತಿಳಿಸಿದೆ.

ADVERTISEMENT

‘ಮುಟ್ಟುಗೋಲು ಹಾಕಿದ ವಸ್ತುಗಳ ಮಾಲೀಕತ್ವದ ಕುರಿತಂತೆ ತನಿಖೆ ವೇಳೆ ಸರಕು ಸಾಗಾಣೆ ಮಾಡಿದ ಹಡಗು, ಹಡಗಿನ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತನಿಖೆಯಲ್ಲಿ ಎಲ್ಲ ವಸ್ತುಗಳು ನೀರವ್‌ಗೆ ಸೇರಿದ್ದು ಎಂದು ದೃಢಪಟ್ಟ ಬಳಿಕ ಮುಟ್ಟುಗೋಲು ಹಾಕಿದ್ದೇವೆ’ ಎಂದು ಸ್ಪಷ್ಟಪಡಿಸಿದೆ.

ಈಗ ಮುಟ್ಟುಗೋಲು ಹಾಕಿರುವ ಆಭರಣಗಳ ಮೊತ್ತ 34.87 ಮಿಲಿಯನ್‌ ಡಾಲರ್‌ (₹255 ಕೋಟಿ)ಯಷ್ಟಿದೆ.

‘‍ಪಿಎಂಎಲ್‌ಎ ಮುಟ್ಟುಗೋಲು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಂಕಾಂಗ್‌ನಲ್ಲಿದ್ದ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಆದೇಶ ಪ್ರತಿಯನ್ನು ಪಡೆಯಲಿದ್ದೇವೆ’ ಎಂದಿದೆ.

ಈ ಆಸ್ತಿಯ ಮುಟ್ಟುಗೋಲಿನಿಂದ ನೀರವ್‌ಗೆ ಸೇರಿದ ₹4,744 ಕೋಟಿಯನ್ನು ವಶಕ್ಕೆ ಪಡೆದಂತಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ₹13 ಸಾವಿರ ಕೋಟಿ ಸಾಲಪಡೆದ ನೀರವ್ ಮೋದಿ ಮರುಪಾವತಿ ಮಾಡದೆ ಬ್ರಿಟನ್‌ಗೆ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಅವರ ವಿರುದ್ಧ ಇಂಟರ್‌ಪೋಲ್‌ ರೆಡ್‌ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.