ADVERTISEMENT

ಪ್ರತಿಭಟನೆ: ಶಸ್ತ್ರಸಜ್ಜಿತ ಗೂಂಡಾಗಳ ಕರೆಸಿದ್ದ ಬಿಜೆಪಿ– ಮಮತಾ ಆರೋಪ

ಪಿಟಿಐ
Published 14 ಸೆಪ್ಟೆಂಬರ್ 2022, 15:30 IST
Last Updated 14 ಸೆಪ್ಟೆಂಬರ್ 2022, 15:30 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ‘ಪ್ರತಿಭಟನೆ ವೇಳೆ ಹಿಂಸಾತ್ಮಕ ಪ್ರವೃತ್ತಿ ತೋರಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಗುಂಡು ಹಾರಿಸಬಹುದಿತ್ತು. ಆದರೆ ಸರ್ಕಾರ ಇದಕ್ಕೆ ಆಸ್ಪದ ನೀಡದೆ, ಅತಿ ಹೆಚ್ಚು ಸಂಯಮ ತೋರಿತು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಭ್ರಷ್ಟಾಚಾರವನ್ನು ಖಂಡಿಸಿ ಬಿಜೆಪಿಯು ಮಂಗಳವಾರ ‘ನಬನ್ನ ಅಭಿಯಾನ’ (ರಾಜ್ಯ ಸಚಿವಾಲಯಕ್ಕೆ ಕಾಲ್ನಡಿಗೆ ಜಾಥಾ) ಹಮ್ಮಿಕೊಂಡಿತ್ತು. ಇದು ಹಿಂಸೆಗೆ ತಿರುಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಮಮತಾ, ‘ಬಿಜೆಪಿಯು ರೈಲುಗಳ ಮೂಲಕ ರಾಜ್ಯದ ಹೊರಭಾಗದಿಂದ ಶಸ್ತ್ರಸಜ್ಜಿತ ಗೂಂಡಾಗಳನ್ನು ಕರೆಸಿತ್ತು. ಅವರ ಬಳಿ ಬಾಂಬ್‌ಗಳೂ ಇದ್ದವು. ರಾಜ್ಯದಲ್ಲಿ ಶಾಂತಿ ಕದಡುವುದು ಆ ಪಕ್ಷದ ಉದ್ದೇಶವಾಗಿತ್ತು’ ಎಂದು ಆರೋಪಿಸಿದ್ದಾರೆ.

ADVERTISEMENT

‘ರ‍್ಯಾಲಿಯಲ್ಲಿ ಭಾಗವಹಿಸಿದ್ದವರು ಪೊಲೀಸರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಬಹುದಿತ್ತು. ಆದರೆ ಸರ್ಕಾರ ಈ ವಿಚಾರದಲ್ಲಿ ತಾಳ್ಮೆವಹಿಸಿತು’ ಎಂದಿದ್ದಾರೆ.

‘ದುರ್ಗಾ ಪೂಜೆಗೆ ಇನ್ನು ಕೆಲ ವಾರಗಳಷ್ಟೇ ಇದೆ. ಇಂತಹ ಸಮಯದಲ್ಲಿ ಬಿಜೆಪಿಯು ಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದರಿಂದ ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗಿದೆ’ ಎಂದು ದೂರಿದ್ದಾರೆ.

‘ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ನೆಲೆಗಟ್ಟಿನಲ್ಲಿ ಪ್ರತಿಭಟನೆ ನಡೆಸುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಬಿಜೆಪಿ ಮತ್ತು ಆ ಪಕ್ಷದ ಕಾರ್ಯಕರ್ತರು ಹಿಂಸೆ ಹಾಗೂ ವಿಧ್ವಂಸಕ ಕೃತ್ಯ ನಡೆಸಿದ್ದಾರೆ. ಸಾರ್ವಜನಿಕ ಆಸ್ತಿ‍ಪಾಸ್ತಿಗೆ ಹಾನಿ ಮಾಡಿದ್ದಲ್ಲದೆ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಶಾಂತಿ ಕದಡುವುದಕ್ಕೆ ಆಸ್ಪದ ನೀಡುವುದಿಲ್ಲ. ಹಿಂಸಾಕೃತ್ಯ ನಡೆಸಿದ್ದವರನ್ನು ಬಂಧಿಸಲಾಗುತ್ತದೆ. ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.