ಸುಪ್ರೀಂ ಕೋರ್ಟ್
ನವದೆಹಲಿ: ಹಣ ವಸೂಲಿ ಮಾಡಿಕೊಡಬೇಕಿರುವ ಪ್ರಕರಣಗಳಲ್ಲಿ ಸಿವಿಲ್ ನ್ಯಾಯಾಲಯದಂತೆ ವರ್ತಿಸುವ ಅಧಿಕಾರವು ಪೊಲೀಸರಿಗೆ ಇಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕ್ರಿಮಿನಲ್ ಅಪರಾಧ ಆಗಿದೆ ಎನ್ನುವ ಪ್ರಕರಣಗಳ ತನಿಖೆ ಅವರ ಕೆಲಸ ಎಂದು ನೆನಪಿಸಿಕೊಟ್ಟಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಮತ್ತು 406ರಲ್ಲಿ ವಿವರಿಸಲಾಗಿರುವ ಕ್ರಿಮಿನಲ್ ಅಪರಾಧಗಳ ಸ್ವರೂಪ ಹಾಗೂ ಒಪ್ಪಂದದ ಉಲ್ಲಂಘನೆ, ಹಣ ಪಾವತಿ ಮಾಡದಿರುವಿಕೆ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ವಿವರಿಸಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇರುವ ವಿಭಾಗೀಯ ಪೀಠ ಹೇಳಿದೆ.
ಆದರೆ, ಈ ನ್ಯಾಯಾಲಯ ಮತ್ತೆ ಮತ್ತೆ ನೀಡಿರುವ ತೀರ್ಪುಗಳನ್ನು ಉಲ್ಲಂಘಿಸಲಾಗುತ್ತಿದೆ. ಅವುಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಪೀಠವು ಹೇಳಿದೆ.
ಉತ್ತರ ಪ್ರದೇಶದ ಹಾಪುರ್ ಪೊಲೀಸರು ದಾಖಲಿಸಿಕೊಂಡಿದ್ದ ಎಫ್‌ಐಆರ್, ಲಲಿತ್ ಚತುರ್ವೇದಿ ಮತ್ತು ಇತರರ ವಿರುದ್ಧ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಪೀಠವು ರದ್ದುಪಡಿಸಿದೆ. ಮರದ ವ್ಯಾಪಾರಿಯೊಬ್ಬರು ಮರ ಪೂರೈಸಿದ್ದಕ್ಕೆ ಪ್ರತಿಯಾಗಿ ಪಾವತಿಸಬೇಕಿರುವ ₹1.9 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಕೊಡುತ್ತಿಲ್ಲ ಎಂದು ಇವರ ವಿರುದ್ಧ ದೂರು ಸಲ್ಲಿಸಲಾಗಿತ್ತು.
‘ದೂರಿನಲ್ಲಿ ಹೇಳಿರುವುದು ನಿಜ ಎಂದು ಭಾವಿಸಿದರೂ, ಇಲ್ಲಿ ಕ್ರಿಮಿನಲ್ ಅಪರಾಧ ಸಾಬೀತಾಗುತ್ತಿಲ್ಲ’ ಎಂದು ಪೀಠವು ಹೇಳಿದೆ. ‘ದೂರುದಾರರು ಸಿವಿಲ್ ಪ್ರಕರಣ ದಾಖಲಿಸಬೇಕಿತ್ತು. ಆದರೆ, ಕುಟಿಲ ಉದ್ದೇಶದಿಂದ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಕಾನೂನಿನ ದುರ್ಬಳಕೆಗೆ ಸಮ’ ಎಂದು ಪೀಠವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.