ADVERTISEMENT

ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ: ಎನ್‌ಡಿಎಗೆ 15 ಸ್ಥಾನ ಕೊರತೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 19:54 IST
Last Updated 6 ಜನವರಿ 2019, 19:54 IST
   

ನವದೆಹಲಿ: ಸದ್ಯ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸರ್ಕಾರ ರಚಿಸಲು ಅಗತ್ಯವಾದ ಸರಳ ಬಹುಮತಕ್ಕೆ ಇನ್ನೂ 15 ಸ್ಥಾನಗಳ ಕೊರತೆಯಾಗಲಿದೆ ಎಂದು ಇಂಡಿಯಾ ಟಿ.ವಿ–ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಳ ಬಹುಮತ ಕೂಡ ಪಡೆಯುವುದು ಅನುಮಾನ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದ ಕಾರಣ ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು 543 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 272 ಸ್ಥಾನಗಳಲ್ಲಿ ಗೆಲ್ಲುವುದು ಅಗತ್ಯ.

ADVERTISEMENT

ಕಳೆದ ಬಾರಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಸುಲಭವಾಗಿ ಮ್ಯಾಜಿಕ್‌ ಸಂಖ್ಯೆ ದಾಟಿ ಮುನ್ನಡೆದಿದ್ದ ಎನ್‌ಡಿಎ ಈ ಬಾರಿ 257 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ 146 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳಲಿವೆ ಎಂದು ಸಮೀಕ್ಷೆ ಹೇಳಿದೆ.

ಪ್ರಾದೇಶಿಕ ಪಕ್ಷಗಳ ಕೈಯಲ್ಲಿ ಜುಟ್ಟು

ಯಾರಿಗೂ ಸರಳ ಬಹುಮತ ದೊರೆಯುವುದು ಸಂಶಯವದ ಕಾರಣ ಕೇಂದ್ ಸರ್ಕಾರ ರಚನೆ ಸೂತ್ರ ಪ್ರಾದೇಶಿಕ ಪಕ್ಷಗಳ ಕೈ ಸೇರಲಿದೆ.

ಸಮಾಜವಾದಿ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೈತ್ರಿಕೂಟ ಬಹುಮುಖ್ಯ ಭೂಮಿಕೆ ನಿರ್ವಹಿಸಲಿದೆ.

ಅದೇ ರೀತಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಕೆ. ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌), ನವೀನ್‌ ಪಟ್ನಾಯಕ್‌ ಅವರ ಬಿಜು ಜನತಾದಳ (ಬಿಜೆಡಿ), ಆಂಧ್ರ ಪ್ರದೇಶದ ಜಗಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌, ಜಮ್ಮು ಮತ್ತು ಕಾಶ್ಮೀರದ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ, ಅರವಿಂದ್‌ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷದ ಕೈಯಲ್ಲಿ ಸರ್ಕಾರ ರಚನೆ ಸೂತ್ರ ಇದೆ ಎಂದು ಸಮೀಕ್ಷೆ ಹೇಳಿದೆ.

ತಮಿಳುನಾಡಿನ ಎಐಎಡಿಎಂಕೆ,ಎಎಂಎಂಕೆ, ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ, ಐಎನ್‌ಎಲ್‌ಡಿ, ಜೆವಿಎಂ (ಪಿ) ರೀತಿಯ ಸಣ್ಣಪುಟ್ಟ ಪಕ್ಷಗಳನ್ನು ಕಡೆಗಣಿಸುವಂತಿಲ್ಲ ಎಂದು ಸುಳಿವು ನೀಡಿದೆ.

**

ಸಮೀಕ್ಷೆ ಹೂರಣ

* ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಅಂದರೆ, ಡಿಸೆಂಬರ್‌ 15–25ರ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ

* ಚುನಾವಣೆಗೂ ಮುಂಚೆ ನವೆಂಬರ್‌ನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಎನ್‌ಡಿಎಗೆ 281, ಯುಪಿಎಗೆ 124 ಮತ್ತು ಇತರರಿಗೆ 138 ಸ್ಥಾನಗಳನ್ನು ನೀಡಲಾಗಿತ್ತು

* ಒಂದು ತಿಂಗಳ ಅವಧಿಯಲ್ಲಿಯೇ ಚಿತ್ರಣ ಬದಲಾಗಿದ್ದು ಎರಡೂ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎಗೆ 24 ಸ್ಥಾನ ನಷ್ಟವಾದರೆ, ಯುಪಿಎಗೆ 22 ಸ್ಥಾನಗಳು ಹೆಚ್ಚಿಗೆ ಲಭಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.