ADVERTISEMENT

ರಫೇಲ್: ಜೆಪಿಸಿಗೆ ಕಾಂಗ್ರೆಸ್ ಪಟ್ಟು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:00 IST
Last Updated 12 ಡಿಸೆಂಬರ್ 2018, 20:00 IST
ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಭಿತ್ತಪತ್ರ ಹಿಡಿದು ಬುಧವಾರ ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ
ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಭಿತ್ತಪತ್ರ ಹಿಡಿದು ಬುಧವಾರ ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ   

ನವದೆಹಲಿ: ರಫೇಲ್ ಯುದ್ಧವಿಮಾನ ಖರೀದಿ ಹಗರಣ ಸಂಬಂಧ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಸರ್ಕಾರವನ್ನು ಕಾಂಗ್ರೆಸ್ ಮತ್ತೆ ಒತ್ತಾಯಿಸಿದೆ.

ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಬುಧವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸ್ಪೀಕರ್ ಪೀಠದ ಎದುರು ಜಮಾಯಿಸಿ ಭಿತ್ತಿಪತ್ರ ಪ್ರದರ್ಶಿಸಿದರು.

ಪಂಜಾಬ್‌ ಕಾಂಗ್ರೆಸ್ ಸಂಸದ ಸುನಿಲ್ ಜಖರ್ ಅವರು ರಫೇಲ್ ಸಂಬಂಧ ಚರ್ಚಿಸಲು ಗೊತ್ತುವಳಿ ಮಂಡನೆಗೆ ನೋಟಿಸ್ ನೀಡಿದರು. ಆದರೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಬುಧವಾರ ಇದನ್ನು ಕೈಗೆತ್ತಿಕೊಳ್ಳಲಿಲ್ಲ.

ADVERTISEMENT

ಎಡಿಎಂಕೆ, ತೆಲುಗುದೇಶಂ, ಶಿವಸೇನಾ ಸಂಸದರೂ ಕಾಂಗ್ರೆಸ್‌ ಜೊತೆ ದನಿಗೂಡಿಸಿದರು.ಅಯೋಧ್ಯೆಯಲ್ಲಿ ಶೀಘ್ರವೇ ರಾಮಮಂದಿರ ನಿರ್ಮಿಸುವಂತೆ ಶಿವಸೇನಾ ಧರಣಿ ನಡೆಸಿತು. ಕಾವೇರಿ ನದಿಗೆ ಮೇಕೆದಾಟು ಜಲಾಶಯ ನಿರ್ಮಾಣ ಸ್ಥಗಿತಗೊಳಿಸುವಂತೆ ಎಐಎಡಿಎಂಕೆ ಆಗ್ರಹಿಸಿತು. ವಿಶಾಖಪಟ್ಟಣದಲ್ಲಿ ರೈಲ್ವೆ ವಲಯ ಕಚೇರಿ ತೆರೆಯುವಂತೆ ಟಿಡಿಪಿ ಸದಸ್ಯರು ಒತ್ತಾಯಿಸಿದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿಟಿಡಿಪಿ ಸದಸ್ಯರೂ ಪ್ರತಿಭಟನೆ ನಡೆಸಿದರು.

ರಾಜ್ಯಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿಲ್ಲ. ‘ಆಟಿಸಂ, ಸೆರೆಬ್ರಲ್ ಪಾಲ್ಸಿ, ಮಾನಸಿಕ ಅಸ್ವಸ್ಥತೆ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಅಭಿವೃದ್ಧಿ ಟ್ರಸ್ಟ್ ತಿದ್ದುಪಡಿ ಮಸೂದೆ’ಗೆ ಪ್ರತಿಭಟನೆ ನಡುವೆಯೇ ಅಂಗೀಕಾರ ದೊರೆಯಿತು.

ಪ್ರಮಾಣ ವಚನ :ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ವಿ.ಎಸ್‌. ಉಗ್ರಪ್ಪ ಮತ್ತು ಎಲ್‌.ಆರ್‌. ಶಿವರಾಮೇ ಗೌಡ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಬ್ಬರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್‌ನ ಉಗ್ರಪ್ಪ ಅವರು ಬಳ್ಳಾರಿಯಿಂದ ಹಾಗೂ ಜೆಡಿಎಸ್‌ನ ಶಿವರಾಮೇ ಗೌಡರು ಮಂಡ್ಯದಿಂದ ಚುನಾಯಿತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.