ನವದೆಹಲಿ: ‘ಹದಗೆಟ್ಟ ರಸ್ತೆಯಲ್ಲಿನ ಗುಂಡಿಗಳ ಪರಿಣಾಮದಿಂದಸಂಭವಿಸಿದ ಅಪಘಾತಗಳಲ್ಲಿ ಐದು ವರ್ಷಗಳಲ್ಲಿ 14,926 ಸಾವಿಗೀಡಾಗಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಸಾವುಗಳು ಸ್ವೀಕಾರಾರ್ಹವಲ್ಲ’ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ, ದೀಪಕ್ ಗುಪ್ತಾ ಹಾಗೂ ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ರಸ್ತೆ ಗುಂಡಿಗಳಿಂದ ಸಾವಿಗೀಡಾಗುವುದು, ಭಯೋತ್ಪಾದಕರಿಂದ ಹತ್ಯೆಗೀಡಾಗುವುದಕ್ಕಿಂತಲೂ ದಾರುಣ’ ಎಂದಿದೆ. ಅಲ್ಲದೆ, ಈ ಕುರಿತು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
‘ರಸ್ತೆ ಗುಂಡಿಗಳ ಪರಿಣಾಮ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದೂ ನ್ಯಾಯಪೀಠ ಹೇಳಿದೆ.
‘ಗುಣಮಟ್ಟದ ರಸ್ತೆಯನ್ನು ನಿರ್ವಹಿಸಬೇಕಾದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡದ ಕಾರಣದಿಂದ ಇಂತಹ ಅಪಘಾತಗಳು ಸಂಭವಿಸುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದೂ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ನೇತೃತ್ವದಲ್ಲಿ ರಚಿಸಲಾಗಿರುವ ರಸ್ತೆ ಸುರಕ್ಷತಾ ಸಮಿತಿಯು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಕುರಿತು ಎರಡು ವಾರಗಳಲ್ಲಿ ವರದಿ ನೀಡಬೇಕು ಎಂದೂ ನ್ಯಾಯಪೀಠ ಸೂಚಿಸಿತಲ್ಲದೆ, ರಸ್ತೆ ಸುರಕ್ಷತೆ ಕಾಯ್ದುಕೊಳ್ಳುವ ಕುರಿತು ಶಿಫಾರಸುಗಳನ್ನು ನೀಡುವಂತೆ ಹೇಳಿತು.
ರಸ್ತೆ ಸುರಕ್ಷತೆ ಕುರಿತ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೇಳೆ, ಈ ವಿಷಯವನ್ನು ನ್ಯಾಯಪೀಠ ಪ್ರಸ್ತಾಪಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.