ADVERTISEMENT

ಪ್ರಶಾಂತ್‌ ಭೂಷಣ್‌ ನಿಂದನೆ ಪ್ರಕರಣ ಪ್ರತ್ಯೇಕ ಪೀಠಕ್ಕೆ

2009ರಲ್ಲಿ ನ್ಯಾಯಮೂರ್ತಿಗಳ ವಿರುದ್ಧ ನೀಡಿದ್ದರು ಎನ್ನಲಾದ ಹೇಳಿಕೆ

ಪಿಟಿಐ
Published 25 ಆಗಸ್ಟ್ 2020, 18:57 IST
Last Updated 25 ಆಗಸ್ಟ್ 2020, 18:57 IST
ಪ್ರಶಾಂತ್‌ ಭೂಷಣ್‌
ಪ್ರಶಾಂತ್‌ ಭೂಷಣ್‌   

ನವದೆಹಲಿ: ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು 2009ರಲ್ಲಿ ನೀಡಿದ್ದರು ಎನ್ನಲಾದ ಹೇಳಿಕೆಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣವು ಅಭಿವ್ಯಕ್ತಿ ಸ್ವಾತಂತ್ರ್ಯದಂಥ ದೊಡ್ಡ ಪ್ರಶ್ನೆಗಳನ್ನು ಎತ್ತಿರುವುದರಿಂದ ಅದರ ವಿಚಾರಣೆಯನ್ನು ಪ್ರತ್ಯೇಕ ಪೀಠಕ್ಕೆ ಒಪ್ಪಿಸಲು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠ ಮಂಗಳವಾರ ನಿರ್ಧರಿಸಿತು.

ಘಟನೆ ನಡೆದು ಸಾಕಷ್ಟು ಸಮಯ ಆಗಿರುವುದರಿಂದ ತ್ವರಿತ ಪೀಠದಿಂದ ಈ ಕುರಿತು ನಿರ್ಧಾರ ಕೈಗೊಳ್ಳಲಾಗದು. ಆದ್ದರಿಂದ ಸೂಕ್ತ ಪೀಠಕ್ಕೆ ಒಪ್ಪಿಸಲು ಮನವಿ ಮಾಡಿ, ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗೆ ಒಪ್ಪಿಸುವಂತೆ ಪೀಠ ಸೂಚಿಸಿತು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನಾತ್ಮಕ ವಿಚಾರಗಳು ಮುನ್ನೆಲೆಗೆ ಬಂದಿವೆ. ಆದ್ದರಿಂದ ಇದನ್ನು ಸಾಂವಿಧಾನಿಕ ಪೀಠಕ್ಕೆ ಒಪ್ಪಿಸಬೇಕು. ಈ ವಿಚಾರವಾಗಿ ಅಟಾರ್ನಿ ಜನರಲ್‌ ಅವರಿಗೂ ನೋಟಿಸ್‌ ನೀಡಬೇಕು’ ಎಂದು ಪ್ರಶಾಂತ್‌ ಪ‍ರ ವಕೀಲ ರಾಜೀವ್‌ ಧವನ್‌ ಒತ್ತಾಯಿಸಿದರು. ‘ಈ ಎಲ್ಲಾ ವಿಚಾರಗಳನ್ನು ಸೂಕ್ತ ನ್ಯಾಯಪೀಠ ತೀರ್ಮಾನಿಸುವುದು’ ಎಂದು ನ್ಯಾಯಮೂರ್ತಿ ಹೇಳಿದರು.

ADVERTISEMENT

‘16 ಮಂದಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಲ್ಲಿ ಅರ್ಧದಷ್ಟು ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ’ ಎಂದು ಪ್ರಶಾಂತ್‌ ಅವರು ತೆಹಲ್ಕಾ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇದರ ವಿರುದ್ಧ ಪ್ರಶಾಂತ್‌ ಹಾಗೂ ತೆಹಲ್ಕಾದ ಸಂಪಾದಕ ತರುಣ್‌ ತೇಜ್‌ಪಾಲ್‌ ವಿರುದ್ಧ ನ್ಯಾಯಾಲಯವು ಸ್ವಯಂಪ್ರೇರಣೆಯಿಂದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.