ಪಾಟ್ನಾದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಮಾಜಿ ಸಂಸದ ಉದಯ್ ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು
–ಪಿಟಿಐ ಚಿತ್ರ
ಪಟ್ನಾ: ಬಿಜೆಪಿಯ ಮಾಜಿ ಸಂಸದ ಉದಯ್ ಸಿಂಗ್ ಅವರನ್ನು ಜನ ಸುರಾಜ್ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಸೋಮವಾರ ಆಯ್ಕೆ ಮಾಡಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ‘ಉದಯ್ ಸಿಂಗ್ ಹಾಗೂ ಆರ್‌ಸಿಪಿ ಸಿಂಗ್ ಅವರು ಭಾನುವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರು ಪಕ್ಷ ಸಂಘಟನೆಗೆ ಆದ್ಯತೆ ನೀಡಲಿದ್ದು, ಮಂಗಳವಾರದಿಂದ ನಾನು ಪಾದಯಾತ್ರೆ ಮುಂದುವರಿಸಲಿದ್ದೇನೆ’ ಎಂದು ತಿಳಿಸಿದರು.
ಕಳೆದ ವರ್ಷ ಅಕ್ಟೋಬರ್ 2ರಂದು ಜನ ಸುರಾಜ್ ಪಕ್ಷವು ಆರಂಭಗೊಂಡಿತ್ತು. ಆಗ ಮಾಜಿ ಐಪಿಎಸ್ ಅಧಿಕಾರಿ ಮನೋಜ್ ಭಾರ್ತಿ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದುವರೆಗೂ ಪೂರ್ಣಪ್ರಮಾಣದ ಅಧ್ಯಕ್ಷರಿಲ್ಲದೇ, ಕಾರ್ಯನಿರ್ವಹಿಸುತಿತ್ತು. ಪಕ್ಷದಲ್ಲಿ ತಾವು ಯಾವುದೇ ಹುದ್ದೆ ವಹಿಸಿಕೊಳ್ಳುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.