ADVERTISEMENT

ಸಿಎಎ ಕಾಯ್ದೆ ಏಕೆ ಬೇಕೆಂಬುದು ಈಗ ನಿಖರವಾಗಿ ಅರ್ಥವಾಗುತ್ತಿದೆ: ಹರದೀಪ್ ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2021, 8:08 IST
Last Updated 23 ಆಗಸ್ಟ್ 2021, 8:08 IST
   

ನವದೆಹಲಿ: ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳು ಮತ್ತು ನಡೆಯುತ್ತಿರುವ ವಾಪಸಾತಿ ಪ್ರಯತ್ನಗಳ ಕುರಿತಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ, ಅಫ್ಘಾನಿಸ್ತಾನ ಬಿಕ್ಕಟ್ಟಿನ ಮೂಲಕ ‘ನಿಖರವಾಗಿ ಏಕೆ’ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಎಂಬುದು ತಿಳಿದುಬರುತ್ತದೆ ಎಂದು ಹೇಳಿದರು.

ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರಿಗೆ ಒತ್ತು ನೀಡುತ್ತಾ, ಅಸ್ತವ್ಯಸ್ತವಾಗಿರುವ ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತವು ತನ್ನ ದೇಶದ ಜನರನ್ನು ಸ್ಥಳಾಂತರ ಮಾಡುತ್ತಿದೆ.

‘ನಮ್ಮ ಅಸ್ಥಿರ ನೆರೆರಾಷ್ಟ್ರಗಳ ಇತ್ತೀಚಿನ ಬೆಳವಣಿಗೆಗಳಿಂದಾಗಿ ಸಿಖ್ಖರು ಮತ್ತು ಹಿಂದೂಗಳು ಕಷ್ಟದ ಸಮಯವನ್ನು ಅನುಭವಿಸುತ್ತಿದ್ದಾರೆ. ಈ ಸಂದರ್ಭವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಏಕೆ ಅಗತ್ಯ ಎಂಬುದನ್ನು ನಿಖರವಾಗಿ ಸೂಚಿಸುತ್ತದೆ’ ಪುರಿ ಟ್ವೀಟ್ ಮಾಡಿದ್ದಾರೆ.

ADVERTISEMENT

2019ರಲ್ಲಿ ಸಿಎಎ ಕಾಯ್ದೆಯನ್ನು ಅಂಗೀಕರಿಸಿದಾಗ ರಾಷ್ಟ್ರ ರಾಜಧಾನಿಯಲ್ಲಿ ಹಲವು ವಾರಗಳ ಕಾಲ ಪ್ರತಿಭಟನೆಗಳು ನಡೆದಿದ್ದವು. ಗಲಭೆಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದರು. 2015ಕ್ಕೂ ಮುನ್ನ ಭಾರತಕ್ಕೆ ಬಂದ ನೆರೆಹೊರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಈ ಕಾನೂನು ಪೌರತ್ವವನ್ನು ಒದಗಿಸುತ್ತದೆ. ಇದು 2019 ರಲ್ಲಿ ಅಂಗೀಕರಿಸಲ್ಪಟ್ಟು, ಜನವರಿ 10, 2020 ರಲ್ಲಿ ಜಾರಿಗೆ ಬಂದಿತು.

ಅಫ್ಗಾನಿಸ್ತಾನ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ‘ಆಫ್ಗಾನ್ ಸಹೋದರರು ಮತ್ತು ಸಹೋದರಿಯರಿಗೆ’ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ವಿಶೇಷವಾಗಿ ಆಶ್ರಯವನ್ನು ಎದುರು ನೋಡುತ್ತಿರುವ ಸಿಖ್ ಮತ್ತು ಹಿಂದೂ ಅಲ್ಪಸಂಖ್ಯಾತರ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.

ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ ನಗರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತವು ಭಾನುವಾರ 329 ನಾಗರಿಕರು ಮತ್ತು ಇಬ್ಬರು ಆಫ್ಗಾನ್ ಸಂಸದರು ಸೇರಿದಂತೆ ಸುಮಾರು 400 ಜನರನ್ನು ಮೂರು ವಿಭಿನ್ನ ವಿಮಾನಗಳ ಮೂಲಕ ಕರೆತಂದಿದೆ. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.