ADVERTISEMENT

ವಿಶ್ವ ಮಹಿಳಾ ದಿನ: ಕರ್ನಾಟಕದ ಇಬ್ಬರು ಸೇರಿ 29 ಮಹಿಳೆಯರಿಗೆ ನಾರಿಶಕ್ತಿ ಪುರಸ್ಕಾರ

ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ಪಿಟಿಐ
Published 8 ಮಾರ್ಚ್ 2022, 14:21 IST
Last Updated 8 ಮಾರ್ಚ್ 2022, 14:21 IST
2021ನೇ ಸಾಲಿನಲ್ಲಿ ನಾರಿಶಕ್ತಿ ಪುರಸ್ಕಾರಕ್ಕೆ ಭಾಜನರಾದ ಬೆಳಗಾವಿಯ ಶೋಭಾ ಗಸ್ತಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದರು. -ಅರಗ ಜ್ಞಾನೇಂದ್ರ ಅವರ ಟ್ವೀಟರ್ ಖಾತೆಯಿಂದ
2021ನೇ ಸಾಲಿನಲ್ಲಿ ನಾರಿಶಕ್ತಿ ಪುರಸ್ಕಾರಕ್ಕೆ ಭಾಜನರಾದ ಬೆಳಗಾವಿಯ ಶೋಭಾ ಗಸ್ತಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದರು. -ಅರಗ ಜ್ಞಾನೇಂದ್ರ ಅವರ ಟ್ವೀಟರ್ ಖಾತೆಯಿಂದ   

ನವದೆಹಲಿ(ಪಿಟಿಐ): ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕದ ಇಬ್ಬರು ಸಾಧಕಿಯರು ಸೇರಿದಂತೆ 29 ಮಹಿಳಾ ಸಾಧಕಿಯರಿಗೆ (2020 ಮತ್ತು 2021ನೇ ಸಾಲಿನ) ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ನಾರಿಶಕ್ತಿ ಪುರಸ್ಕಾರ ಪ್ರದಾನ ಮಾಡಿದರು.

ಸಾಫ್ಟ್‌ವೇರ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಕರ್ನಾಟಕದ ಇಂಟೆಲ್ ಇಂಡಿಯಾ ಕಂಪನಿಯಕಂಟ್ರಿಹೆಡ್ ಆಗಿರುವ ನಿವೃತ್ತಿ ರಾಯ್ ಮತ್ತು ಮಹಿಳೆಯರ ಸಬಲೀಕರಣ ಮತ್ತು ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಶ್ರಮಿಸುತ್ತಿರುವ ಬೆಳಗಾವಿ ಮೂಲದ ಶೋಭಾ ಗಸ್ತಿ ಅವರು ನಾರಿಶಕ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.ಗಸ್ತಿ ಅವರು 2020ನೇ ಸಾಲಿನ ಹಾಗೂ ನಿವೃತ್ತಿ ರಾಯ್ ಅವರು 2021ನೇ ಸಾಲಿನ ಪುರಸ್ಕಾರಕ್ಕೆ ಭಾಜನರಾದರು.

ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಶ್ರಮಿಸುವ ಮಹಿಳೆಯರು ಮತ್ತು ಸಂಸ್ಥೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಾರಿಶಕ್ತಿ ಪುಸ್ಕಾರವನ್ನು ಆರಂಭಿಸಿದೆ.

ADVERTISEMENT

ಹಾವುಗಳ ರಕ್ಷಕಿ ಬರೋಡೆಗೂ ಪುರಸ್ಕಾರ

ನಾರಿಶಕ್ತಿ ಪುರಸ್ಕೃತರಲ್ಲಿ ಹಾವುಗಳ ಮೊದಲ ರಕ್ಷಕಿ ಎಂಬ ಖ್ಯಾತಿಯ ಹಾಗೂ ಪರಿಸರ ಮತ್ತು ಅರಣ್ಯ ಜೀವಿಗಳ ರಕ್ಷಣೆಗಾಗಿ ಸ್ಥಾಪಿಸಿರುವ ಸಾಯ್‌ರೇ ವಂಚರೆ ಫೌಂಡೇಷನ್ ಸಂಸ್ಥಾಪಕಿ ವನಿತಾ ಜಗದೇವೊ ಬರೋಡೆ, ಕಥಕ್ ನೃತ್ಯಗಾರ್ತಿ ಸಾಯ್ಲೀ ನಂದಕಿಶೋರ್ ಅಗವಾನೆ, ಸಾವಯವ ಕೃಷಿ ಮಾಡುವ ಉಷಾಬೆನ್ ದಿನೇಶ್ ಭಾಯಿ ವಾಸವ ಸೇರಿದಂತೆ ಇತರರು ಸೇರಿದ್ದಾರೆ. ಜಗದೇವೋ ಬರೋಡೆ ಅವರು 50 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿ, ಅವುಗಳನ್ನು ಕಾಡಿಗೆ ಬಿಟ್ಟಿದ್ದಾರೆ. ಜತೆಗೆ ಹಾವು ಕಚ್ಚಿದಾಗ ಹೇಗೆ ಶುಶ್ರೂಷೆ ಮಾಡಬೇಕು ಸೇರಿದಂತೆ ಹಾವಿಗೆ ಸಂಬಂಧಿಸಿದ ಇನ್ನಿತರ ಜಾಗೃತಿ ಮೂಡಿಸುವ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮಹಿಳೆಯರ ಸಾಧನೆಗಳ ಬಗ್ಗೆ ಕೊಂಡಾಡಿದ್ದಾರೆ. ಅಲ್ಲದೆ ಹಲವು ಯೋಜನೆಗಳ ಮೂಲಕ ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಟ್ವಿಟ್‌ ಮಾಡಿದ್ದಾರೆ.

ನಾರಿಶಕ್ತಿ ಮತ್ತು ಸಾಮಾಜಿಕ ಭದ್ರತೆ, ಗುಣಮಟ್ಟದ ಆರೋಗ್ಯ, ಶಿಕ್ಷಣ ಮತ್ತು ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳಿಗೆ ಸೆಲ್ಯೂಟ್ ಮಾಡುತ್ತೇನೆ. ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಸಾಧನೆ ಅಗ್ರಗಣ್ಯವಾದದ್ದು ಎಂದು ಮೋದಿ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.