ADVERTISEMENT

ಬಾಲಕಿ ಅತ್ಯಾಚಾರ, ಕೊಲೆ: ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

ಪಿಟಿಐ
Published 14 ಡಿಸೆಂಬರ್ 2025, 12:56 IST
Last Updated 14 ಡಿಸೆಂಬರ್ 2025, 12:56 IST
   

ನವದೆಹಲಿ: ಮಹಾರಾಷ್ಟ್ರದಲ್ಲಿ 2012ರಲ್ಲಿ ಎರಡು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಹತ್ಯೆಗೈದ ‌‌‌‌‌‌‌ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿ ಕ್ಷಮಾದಾನ ಕೋರಿ ಸಲ್ಲಿಸಿದ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

2022ರ ಜುಲೈ 25ರಂದು ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರಪತಿ ಮುರ್ಮು ಅವರು ತಿರಸ್ಕರಿಸಿದ 3ನೇ ಕ್ಷಮಾದಾನ ಅರ್ಜಿ ಇದಾಗಿದೆ.

ಅಪರಾಧಿ ರವಿ ಅಶೋಕ್ ಘುಮಾರೆಗೆ ವಿಧಿಸಿದ್ದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್‌ 2019ರ ಅಕ್ಟೋಬರ್‌ 3ರಂದು ಎತ್ತಿಹಿಡಿದಿತ್ತು. ಲೈಂಗಿಕ ಹಸಿವನ್ನು ನೀಗಿಸಿಕೊಳ್ಳಲು ಆತ ಎಲ್ಲಾ ನೈಸರ್ಗಿಕ, ಸಾಮಾಜಿಕ ಮತ್ತು ಕಾನೂನಿನ ಮಿತಿಗಳನ್ನು ಮೀರಿದ್ದಾನೆ ಎಂದು ಕೋರ್ಟ್‌ ಹೇಳಿತ್ತು.

ADVERTISEMENT

ಇನ್ನೂ ಅರಳಬೇಕಿದ್ದ ಜೀವವೊಂದನ್ನು ಆ ವ್ಯಕ್ತಿ ನಿರ್ದಯೆಯಿಂದ ಕೊಂದಿದ್ದಾನೆ. ಎರಡು ವರ್ಷದ ಮಗುವಿನ ಮೇಲೆ ಎಸಗಿದ ಕೃತ್ಯವು ಆತನ ಕೊಳಕು ಮತ್ತು ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆಯಲ್ಲದೆ, ಕ್ರೌರ್ಯದ ಭಯಾನಕ ಕಥೆಯನ್ನು ಪ್ರದರ್ಶಿಸುತ್ತದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ( ಭಾರತದ ಈಗಿನ ಮುಖ್ಯ ನ್ಯಾಯಮೂರ್ತಿ) ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಆ ಸಂದರ್ಭದಲ್ಲಿ ಹೇಳಿತ್ತು.

ಮಹಾರಾಷ್ಟ್ರದ ಜಲ್ನಾ ನಗರದ ಇಂದಿರಾನಗರ ಪ್ರದೇಶದಲ್ಲಿ 2012ರ ಮಾರ್ಚ್‌ 6ರಂದು ಈ ಘಟನೆ(ಬಾಲಕಿ ಮೇಲೆ ಅತ್ಯಾಚಾರ, ಕೊಲೆ) ನಡೆದಿತ್ತು. ಬಾಲಕಿಗೆ ಚಾಕೊಲೇಟ್‌ ನೀಡುವ ಆಮಿಷ ಒಡ್ಡಿ ಘುಮಾರೆ ಕೃತ್ಯ ಎಸಗಿದ್ದ.

ವಿಚಾರಣಾ ನ್ಯಾಯಾಲಯವು 2015ರ ಸೆಪ್ಟೆಂಬರ್ 16ರಂದು ಆತನನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತ್ತು. 2016ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.